“ಕನಕ ಪ್ರಜ್ಞೆ” ಸಂವಾದಲ್ಲಿ ಸುದ್ದಿಮನೆ “ಜಾತಿ ಸಮೀಕ್ಷೆ”  ಬಹಿರಂಗ..!

Senior journalist D. Umapati cited statistics that a majority of journalists in strategic positions in Indian media organizations, including editors, news editors, and chief reporters, belong to the upper caste.

 

ಮೈಸೂರು, ಡಿ.೩೦,೨೦೨೫: ಭಾರತದ ಮಾಧ್ಯಮ ಸಂಸ್ಥೆಗಳ‌ಲ್ಲಿನ  ಸಂಪಾದಕರು, ಸುದ್ದಿ ಸಂಪಾದಕರು, ಮುಖ್ಯ ವರದಿಗಾರರು ಸೇರಿದಂತೆ ಆಯಾಕಟ್ಟಿನ‌ ಜಾಗದಲ್ಲಿ ಇರುವವರಲ್ಲಿ ಬಹುಪಾಲು ಪತ್ರಕರ್ತರು ಮೇಲ್ಜಾತಿಗೆ ಸೇರಿದ್ದಾರೆ ಎಂದು ಹಿರಿಯ ಪತ್ರಕರ್ತ ಡಿ. ಉಮಾಪತಿ ಅಂಕಿಅಂಶಗಳ ಸಮೇತ ಉಲ್ಲೇಖಿಸಿದರು.

ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಕುರಿತ ವಿಚಾರ ಸಂಕಿರಣದಲ್ಲಿ ‘ವರ್ತಮಾನ ತವಕ, ತಲ್ಲಣಗಳು: ಕನಕದಾಸರು ಮತ್ತು ಮಾಧ್ಯಮ’ ವಿಷಯ ಮಂಡಿಸಿದರು.

ಸುದ್ದಿಸಂಸ್ಥೆಯೊಂದ 2019ರಿಂದ 2022ರವರೆಗಿನ ನಡುವಿನ ಅವಧಿಯಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ, ಭಾರತೀಯ ಸುದ್ದಿಮನೆಗಳಲ್ಲಿ ದಲಿತರು, ಹಿಂದುಳಿದ ವರ್ಗದವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳು ಆಹ್ವಾನಿಸುವ ಪೆನಲಿಸ್ಟ್ ಗಳು ಕೂಡ ಮೇಲ್ಜಾತಿಗೆ ಸೇರಿದವರೇ ಆಗಿರುತ್ತಾರೆ ಎಂದ ಅವರು, ಸುದ್ದಿಮನೆಗಳು ವೈವಿಧ್ಯಮಯಗೊಳ್ಳುವುದರ ಅವಶ್ಯಕತೆಯನ್ನು ಪ್ರತಿಪಾದಿಸಿದರು.

ದೇಶದ ಇತಿಹಾಸ ಕ್ರಾಂತಿ ಮತ್ತು ಪ್ರತಿಕ್ರಾಂತಿಯಿಂದ ಕೂಡಿದೆ. ಕನಕದಾಸರು ಪ್ರತಿಕ್ರಾಂತಿಯ ಭಾಗ. ಬುದ್ಧ, ಬಸವಾದಿ ವಚನಕಾರರ ಪ್ರಜ್ಞೆಯ ಮುಂದುವರಿಕೆಯೇ ಕನಕಪ್ರಜ್ಞೆಯಾಗಿದೆ. ‘19–20ನೇ ಶತಮಾನದಲ್ಲಿಯೂ ಕನಕ ಮಾದರಿಯ ಪ್ರತಿಭಟನೆ ದೇಶದಲ್ಲಿ ನಡೆದಿದೆ. ಉಡುಪಿ ದೇಗುಲ ಪ್ರವೇಶಕ್ಕೆ ಕನಕ ಪ್ರತಿಭಟನೆ ನಡೆಸಿದಂತೆ, ರಾಮನಾಮಿಗಳು ರಾಮನಾಮವನ್ನು ಮೈಮೇಲೆ ಬರೆದುಕೊಂಡರು. ಅದು ಅವರ ಮೈಮೇಲೆ ಇರಬಾರದೆಂದು ಮೇಲ್ವರ್ಗದವರು ಸುಟ್ಟರು. ನ್ಯಾಯಾಲಯದ ಮೆಟ್ಟಿಲೇರಿದ್ದರು’ ಎಂದು ಸ್ಮರಿಸಿದರು.

ಕನಕ ಏಕವ್ಯಕ್ತಿ ಮಾಧ್ಯಮ :

ಮಾಧ್ಯಮಗಳಿಲ್ಲದ ಕಾಲದಲ್ಲಿ ಕನಕದಾಸರು ಏಕವ್ಯಕ್ತಿ ಮಾಧ್ಯಮವಾಗಿ ಕೆಲಸ ಮಾಡಿದರು. ಅವರು ಇಂದಿನ ಮಾಧ್ಯಮಗಳಿಗೆ ಮಾದರಿ. ವ್ಯವಸ್ಥೆಯನ್ನು ತಿದ್ದಲು ಪ್ರತಿಭಟಿಸುವ, ಪ್ರಶ್ನಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಮಾಧ್ಯಮಗಳು ಪ್ರದರ್ಶಿಸಬೇಕು  ಎಂದು ಚಿಂತಕ ಎ.ನಾರಾಯಣ ಹೇಳಿದರು.

‘ಧರ್ಮ, ಭಕ್ತಿ, ಅನುಭಾವ’ ಕುರಿತು ವಿಷಯ ಮಂಡಿಸಿದ ಅವರು, ‘ಎಲ್ಲೆಲ್ಲೂ ದೇವರಿದ್ದಾನೆಂದು ಹೇಳಿದ ಕನಕದಾಸರು, ಉಡುಪಿಗೆ ಹೋಗಿ ವ್ಯಾಸರಾಯರ ಶಿಷ್ಯ, ದಾಸ. ನನಗೇಕೆ ಪ್ರವೇಶವಿಲ್ಲವೆಂದರು. ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ ಎಂದು ಹೇಳುವುದು ಪ್ರತಿಭಟನೆ. ಕನಕದಾಸರು ವ್ಯವಸ್ಥೆಯೊಳಗಿದ್ದುಕೊಂಡೇ ಧರ್ಮದಲ್ಲಿನ ತಾರತಮ್ಯ ಪ್ರಶ್ನಿಸಿದರು’ ಎಂದು ಉದಾಹರಿಸಿದರು.

‘ಕರ್ನಾಟಕದ ಗತವೈಭವ ಎಂದರೆ ಹಂಪಿಯ ಕಲ್ಲಿನ ರಥ ನೆನಪಿಗೆ ಬರುವ ಬದಲು ಬಸವಾದಿ ವಚನಕಾರರು, ಕನಕದಾಸರು ನಡೆಸಿದ ವ್ಯವಸ್ಥೆಯ ವಿರುದ್ಧ ನಡೆಸಿದ ಪ್ರತಿಭಟನೆ ನೆನಪಾಗಬೇಕು. ಈ ಮಾದರಿಯಲ್ಲಿ ಚರಿತ್ರೆಯನ್ನು ನೋಡಬೇಕು’ ಎಂದು ವಿಶ್ಲೇಷಿಸಿದರು.

ಇದಕ್ಕೂ ಮೊದಲು ಸಂಶೋಧಕಿ ಸಿ.ಎಸ್‌.ಪೂರ್ಣಿಮಾ ಅವರು ‘ಸಮಾನತೆ, ಸೌಹಾರ್ದತೆ ಮತ್ತು ಸೋದರತ್ವ’ ಕುರಿತು ವಿಷಯ ಮಂಡಿಸಿದರು.

key words: Senior journalist, D. Umapathy, reveals, media house, inner caste story.

SUMMARY: 

Senior journalist D. Umapathy reveals media house inner caste story.

Senior journalist D. Umapati cited statistics that a majority of journalists in strategic positions in Indian media organizations, including editors, news editors, and chief reporters, belong to the upper caste.