ಮಾಧ್ಯಮಗಳ ಸಾಕ್ಷಿಪ್ರಜ್ಞೆ ಗೆ ಕನ್ನಡಿ ಹಿಡಿದ “ಕನಕ ಪ್ರಜ್ಞೆ”!

"The media considers the language of the government to be its own language, and they need to have a sense of compassion. They need to criticize the government," asserted Purushottam Bilimale, chairman of the Kannada Development Authority.

 

ಮೈಸೂರು, ಡಿ.30,2025: ‘ಮಾಧ್ಯಮಗಳು ಪ್ರಭುತ್ವದ ಭಾಷೆಯನ್ನೇ ತಮ್ಮ ಭಾಷೆ ಎಂದು ಅಂದುಕೊಂಡಿದ್ದು, ಅವುಗಳಿಗೆ ಕನಕಪ್ರಜ್ಞೆ ಅಗತ್ಯವಾಗಿ ಬೇಕಿದೆ. ಪ್ರಭುತ್ವವನ್ನು ಅವು ವಿಮರ್ಶಿಸಬೇಕಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದರು.

ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ‘ಪ್ರಜಾವಾಣಿ’ ಯು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ‘ಪರಂಪರೆ ಗೌರವಿಸುತ್ತಲೇ ಅದರಿಂದ ಸಿಡಿದ ಕನಕದಾಸರು, ತಮ್ಮ ತನವನ್ನು ಪ್ರತ್ಯೇಕವಾಗಿ ಬೆಳೆಸಿಕೊಂಡ ಗುಣವೇ ಕನಕ ಪ್ರಜ್ಞೆಯಾಗಿದೆ’ ಎಂದರು. ‌‌

‘ಪ್ರಭುತ್ವವು ನಮ್ಮ ಮಿದುಳು, ಭಾಷೆ, ಚಿಂತನಾ ಕ್ರಮವನ್ನೇ ಆಕ್ರಮಿಸಿಕೊಳ್ಳುತ್ತದೆ. ಪ್ರಭುತ್ವದ ಭಾಷೆಯಲ್ಲೇ ಮಾತನಾಡುವುದನ್ನು ಕೆಲವರು ಕರಗತ ಮಾಡಿಕೊಂಡಿದ್ದಾರೆ. ತನ್ನ ಭಾಷೆಯಲ್ಲಿ ಅವರು ಮಾತನಾಡಿದಾಗ ಪ್ರಭುತ್ವವು ಸಂಭ್ರಮಿಸುತ್ತದೆ. ಅವರಿಂದ ಅಪಾಯವಿಲ್ಲವೆಂಬ ಪ್ರಜ್ಞೆ ಮೂಡಿದಾಗ ಬೇಕಾದ ಪ್ರಶಸ್ತಿಯನ್ನೂ ನೀಡಿ ಗೌರವಿಸುತ್ತದೆ. ಆದರೆ, ಕನಕಪ್ರಜ್ಞೆ ಇದಕ್ಕೆ ಹೊರತು’ ಎಂದು ವಿವರಿಸಿದರು.

‘ರಾಮಾಯಣ, ಮಹಾಭಾರತಗಳ ಕಾವ್ಯ ಚೌಕಟ್ಟು ಮೀರಿ ನೈಷಧೀಯ ಚರಿತ್ರೆ ಬರೆದ ಶ್ರೀಹರ್ಷನಂತೆ ಕನಕದಾಸರು ನಳಚರಿತ್ರೆ, ರಾಮಧಾನ್ಯ ಚರಿತೆ ಬರೆದರು. ಕುವೆಂಪು ಅವರೂ ಭಾರತದ ಸಾರ್ವಭೌಮತೆಗೆ ಗೌರವ ತೋರುತ್ತ ಕರ್ನಾಟಕವನ್ನೇ ಕಾವ್ಯವಾಗಿಸಿದರು. ಈ ಮಾದರಿಯಲ್ಲಿ ಪ್ರಭುತ್ವದಿಂದ ಸಿಡಿದು ಭಿನ್ನವಾಗಿ ಮಾತನಾಡಲು ಮಾಧ್ಯಮಗಳು ಶುರು ಮಾಡಿದರೆ, ಅಲ್ಲಿ ಕನಕಪ್ರಜ್ಞೆ ಕಾಣುತ್ತದೆ’ ಎಂದು ವಿಶ್ಲೇಷಿಸಿದರು. ‌‌‌

‘1875ರಲ್ಲಿ ದೇಶದಲ್ಲಿ 374 ಪತ್ರಿಕೆಗಳಿದ್ದವು. ಅವುಗಳಲ್ಲಿ ಸ್ಥಳೀಯ ಭಾಷೆಯ 70 ಪತ್ರಿಕೆಗಳನ್ನು ಬ್ರಿಟಿಷರು ನಿಷೇಧ ಮಾಡಿದ್ದರು. ಈಗಲೂ ರಾಷ್ಟ್ರವಾದಿ ಪತ್ರಕರ್ತ ಎಂದುಕೊಳ್ಳುವವರಿಗೆ ಎಂದಿಗೂ ಪ್ರಭುತ್ವವು  ತಲೆಕೆಡಿಸಿಕೊಳ್ಳದು. ಇವ ನಮ್ಮವನೆಂಬ ಪ್ರಜ್ಞೆ ಅದಕ್ಕಿರುತ್ತದೆ’ ಎಂದರು.

‘ಮಾಧ್ಯಮಗಳು ಕನಕಪ್ರಜ್ಞೆ ಮೈಗೂಡಿಸಿಕೊಂಡರೆ ತೊಂದರೆ ಎದುರಾಗುತ್ತದೆ. ಪತ್ರಿಕೆಯ ಪ್ರಸರಣ, ನೋಡುವವರು ಕಡಿಮೆಯಾಗುತ್ತಾರೆ. ದೇಶದ್ರೋಹಿ ಪಾಕಿಸ್ತಾನಕ್ಕೆ ಹೋಗೆಂದು ವೀಸಾ ಕೊಡುವವರು ಹೆಚ್ಚಾಗುತ್ತಾರೆ. ಏನೇ ಆದರೂ, ಕನಕಪ್ರಜ್ಞೆಯನ್ನು ವಿಸ್ತರಿಸುವ ಧೀಮಂತ ಶಕ್ತಿಯನ್ನು, ಓದುಗ ವರ್ಗವನ್ನು ಸೃಷ್ಟಿಸಿಕೊಳ್ಳುವ ಜವಾಬ್ದಾರಿ ಇಂದಿನ ಪತ್ರಿಕೆಗಳಿಗೆ ಬೇಕಿದೆ. ಅಂಥವನ್ನು ಬೆಳೆಸುವ ನೈತಿಕ ಜವಾಬ್ದಾರಿ ಜನರ ಮೇಲಿದೆ’ ಎಂದರು.

ಇದಕ್ಕೂ ಮೊದಲು ಕನಕ ಕೀರ್ತನೆ ಗಳನ್ನು ಎಂ.ಮಹಾಲಿಂಗು ಮತ್ತು ತಂಡದವರು ಹಾಡಿದರು. ಚಾರ್ವಿ ಸತೀಶ್‌ ಅವರು ‘ಹರಿಭಕ್ತಿಸಾರ’ ಕಾವ್ಯದ ‘ಕನಕ ಗಮಕ’ ವಾಚನ ಮಾಡಿದರು.

ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್‌.ಮಮತಾ, ‘ಪ್ರಜಾವಾಣಿ’ ಮೈಸೂರು ಬ್ಯುರೊ ಮುಖ್ಯಸ್ಥ ಕೆ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.

KEY WORDS: The “sense of compassion”, that mirrors the, media’s sense of witness, kanaka, a debate, organized by, Prajavani newspaper.

SUMMARY:

The “sense of compassion” that mirrors the media’s sense of witness! kanaka a debate organized by Prajavani newspaper.

“The media considers the language of the government to be its own language, and they need to have a sense of compassion. They need to criticize the government,” asserted Purushottam Bilimale, chairman of the Kannada Development Authority.