ಮನೆ ಹಾನಿಗೊಳಗಾದವರಿಗೆ ಶ್ರೀಘ್ರವೇ ಪರಿಹಾರ ನೀಡಿ-ಸಚಿವ ಎನ್. ಚಲುವರಾಯಸ್ವಾಮಿ ಸೂಚನೆ

ಮಂಡ್ಯ.ಡಿಸೆಂಬರ್,30,2025 (www.justkannada.in): ಜಿಲ್ಲೆಯಲ್ಲಿ ಸದರಿ ವರ್ಷ ಒಟ್ಟು 151  ಮನೆಗಳು ಮುಂಗಾರಿನಲ್ಲಿ ಹಾನಿಗೊಳಗಾಗಿದ್ದು ಈಗಾಗಲೇ ಅರ್ಹರಿಗೆ 60.36 ಲಕ್ಷ ಪರಿಹಾರ ಧನವನ್ನು ನೀಡಲಾಗಿದೆ. ಅಧಿಕಾರಿಗಳು ಮನೆ ಹಾನಿಗೊಳಗಾದವರ ವಿವರಗಳನ್ನು ರಾಜೀವ್ ಗಾಂಧಿ ಹೌಸಿಂಗ್ ಪೋರ್ಟಲ್ ನಲ್ಲಿ ನಮೂದಿಸಿ ಶೀಘ್ರವಾಗಿ ಮನೆ ನಿರಾಶ್ರಿತರಿಗೆ  ಪರಿಹಾರ ಒದಗಿಸಿ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನಿರಾವರಿ ನಿಗಮದ ಕೆರೆಗಳು ಶೇ 80 ರಷ್ಟು ತುಂಬಿದೆ. ಮಳೆ ಆಶ್ರಿತ ಕೆರೆಗಳು ಮಾತ್ರ ಕಡಿಮೆ ನೀರಿನ ಪ್ರಮಾಣವನ್ನು ಹೊಂದಿದೆ. ಜಿಲ್ಲೆಯಲ್ಲಿ 407 ಕೆರೆಗಳು ಶೇ 100 ರಷ್ಟು ಭರ್ತಿಯಾಗಿದೆ. ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದು ತಿಳಿಸಿದರು.

ಹಿಂದೆ ದರಖಾಸ್ತ್ ಪೋಡಿ ಮಾಡಲು ಕನಿಷ್ಠ 5 ದಾಖಲೆಗಳ ಆಗತ್ಯ ಇತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 3 ದಾಖಲೆ ಇದ್ದರೆ ಸಾಕು ದರಖಾಸ್ತ್ ಪೋಡಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ದಾಖಲೆ ಇಲ್ಲದೆ ಇದ್ದಲ್ಲಿ ಸದರಿ ಅರ್ಜಿ ದಾರರ ಊರಿಗೆ ಹೋಗಿ ಪರಿಶೀಲನೆ ಮಾಡಿ ಯಾವುದೇ ಅಡಚಣೆ ಇಲ್ಲದೆ ಇದ್ದಲ್ಲಿ ಅವರಿಗೆ ದರಖಾಸ್ತ್ ಪೋಡಿ ಮಾಡಿಕೊಡಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸದರಿ ಯೋಜನೆಯನ್ನು ಜಾರಿಗೆ ತರಲಾಗುವುದು. ಮುಂದಿನ ಆರು ತಿಂಗಳೊಳಗಾಗಿ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳದೆ ವಿಲೇವಾರಿ ಮಾಡಿ ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ 3.67.739 ಫಲಾನುಭವಿಗಳು ಇದ್ದು ಮಾಸಿಕ 37.58 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಸದರಿ ವರ್ಷ ಮೃತಪಟ್ಟವರು ಹಾಗೂ ಅನರ್ಹ 15.387 ಫಲಾನುಭವಿಗಳನ್ನು ರದ್ದು ಪಡಿಸಲಾಗಿದೆ. ಅಧಿಕಾರಿಗಳು ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಸೆಪ್ಟೆಂಬರ್ ಮಾಹೆಯಿಂದ ಡಿಸೆಂಬರ್ 17 ರವರೆಗೂ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ 69.79 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು. 198 ಫಲಾನುಭವಿಗಳಿಗೆ 18.16 ಲಕ್ಷ ಪರಿಹಾರ ಧನ ವಿತರಣೆ ಮಾಡಲಾಗಿದೆ. ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಸಿ.ಡಿ.ಎಸ್ ನಾಲೆ ಒಡೆದು ಉಂಟಾಗಿದ್ದ ಬೆಳೆ ಹಾನಿಗೂ  ಪರಿಹಾರ ನೀಡಲಾಗಿದೆ. ಎಸ್.ಡಿ.ಎಂ .ಎಫ್  ಅನುದಾನವನ್ನು ರೂ 5.50 ಕೋಟಿ ಮೊತ್ತದ 4 ಕಾಮಗಾರಿಗಳಲ್ಲಿ 1 ಪೂರ್ಣಗೊಂಡಿದ್ದು ಉಳಿದ 3 ಕಾಮಗಾರಿಗಳು ಶೇ 50 ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.

ಜಲಧಾರೆ ಮತ್ತು ಜಲ್ ಜೀವನ್ ವಿಷನ್ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ. ವೇಗವಾಗಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಕಾಮಗಾರಿಯ ವೇಗವನ್ನು ಹೆಚ್ಚಿಸಿ. ಎಲ್ಲಿ ಸಮಸ್ಯೆ ಉಂಟಾಗಿದೆ ಅಧಿಕಾರಿಗಳು ನನ್ನ ಗಮನಕ್ಕೆ ತನ್ನಿ. ಜಿಲ್ಲೆಯಲ್ಲಿ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಿ ಇಲ್ಲದ ಪಕ್ಷದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ನರೇಂದ್ರ ಸ್ವಾಮಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಾವಿನ ಪ್ರಮಾಣ ಸಂಖ್ಯೆ ಕಳೆದ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಇಲ್ಲಿಯವರೆಗೂ ಮಂಡ್ಯ ವ್ಯಾಪ್ತಿಯಲ್ಲಿ 1.86 ಲಕ್ಷ ಜನರು ರಸ್ತೆ ನಿಯಮವನ್ನು ಉಲ್ಲಂಘಿಸಿದ್ದಾರೆ. ಇಲ್ಲಿಯವರೆಗೂ 4.53 ಕೋಟಿ ದಂಡವನ್ನು ವಸೂಲಾತಿ ಮಾಡಲಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಅಗತ್ಯ ಇರುವ ಕಡೆ 5 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಂಕ್ಷನ್ ಇರುವ ಕಡೆ ಹಾಗೂ ಹಳ್ಳಿಗಳಿಂದ ಹೈವೇ ಮುಟ್ಟುವ ಸ್ಥಳಗಳಲ್ಲಿ ದೀಪದ ವ್ಯವಸ್ಥೆ ಕಲ್ಪಿಸಿ ಎಂದು ಹೇಳಿದರು.

ಜಲಧಾರೆ ಮತ್ತು ಜಲ ಜೀವನ್ ವಿಷನ್ ಯೋಜನೆಯಡಿ ಪೈಪ್ ಅಳವಡಿಸಲು ಕಾಂಕ್ರೀಟ್ ರಸ್ತೆ ಹಾಗೂ ಡಾಂಬರು ರಸ್ತೆಯನ್ನು ಅಗೆದು ಹಾಗೆ ಬಿಟ್ಟಿದ್ದಾರೆ. ಜನರಿಗೆ ಇದರಿಂದ ಹೆಚ್ಚು ತೊಂದರೆ ಉಂಟಾಗುತ್ತಿದೆ. ಜನಪ್ರತಿನಿಧಿಗಳು ಜನಸಾಮಾನ್ಯರೊಡನೆ ಸಂಪರ್ಕ ಹೊಂದಿದಾಗ ಜನರು ಇದರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸದರಿ ರಸ್ತೆಯನ್ನು ಫೆಬ್ರವರಿ ಕೊನೆಯಲ್ಲಿ ಸರಿಪಡಿಸಬೇಕು ಎಂದು ತಿಳಿಸಿದರು.

ಎಸ್ ಎಸ್ ಎಲ್ ಸಿ ಫಲಿತಾಂಶ ವೃದ್ಧಿಸಲು ಡಿಸಿ ಮತ್ತು ಸಿ.ಇ.ಓ ವಿಶೇಷ ಮುತುವರ್ಜಿ ವಹಿಸಿ ಕ್ರಮ ತೆಗೆದುಕೊಳ್ಳಿ. ಕಳೆದ ಬಾರಿಗಿಂತ ಸದರಿ ವರ್ಷ ಫಲಿತಾಂಶ ವೃದ್ಧಿಸಬೇಕು. ಎಲ್ಲಾ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕು. ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪಠ್ಯಗಳನ್ನು ಮಾಡಿದ ಶಿಕ್ಷಕರ ವಿರುದ್ಧ ಕ್ರಮ ವಹಿಸಿ. ಶಿಥಿಲಗೊಂಡ ಶಾಲೆಗಳತ್ತ ಗಮನ ಹರಿಸಿ ಕ್ರಮವಹಿಸಿ. ಅಗತ್ಯವಿದ್ದಲ್ಲಿ ಶಾಸಕರ ಅನುದಾನದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ,  2014ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಿಲ್ಲೆಯ ಡೀಮ್ಡ್ ಫಾರೆಸ್ಟ್ ಸರ್ವೇ ಮಾಡಲಾಗಿದ್ದು ಜಿಲ್ಲೆಯಲ್ಲಿ 32,958.95 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಸರ್ವೇ ಮಾಡಲಾಗಿದೆ. ಆದರೆ ಸದರಿ ಸಮೀಕ್ಷೆಯಲ್ಲಿ ಕೆಲವು ಲೋಪಗಳು ಕಂಡು ಬಂದಿದ್ದು. ಮತ್ತೆ ಹೋಬಳಿ ಮಟ್ಟದಲ್ಲಿ ಸರ್ವೇ ಅಧಿಕಾರಿಗಳನ್ನು ನೇಮಿಸಿ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಶೇ 42 ರಷ್ಟು ಸರ್ವೇ ನಡೆಸಲಾಗಿದೆ. ಮೂರು ತಿಂಗಳ ಒಳಗಾಗಿ ಸಮೀಕ್ಷೆಯನ್ನು ಮುಗಿಸಲಾಗುವುದು. ರಾಜ್ಯ ಡೀಮ್ಡ್ ಫಾರೆಸ್ಟ್ ಸರ್ವೇಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಪೌತಿಖಾತೆ ಆಂದೋಲನದಲ್ಲಿ ಆಫ್ ಲೈನ್ ನಲ್ಲಿ 67.659 ಖಾತೆಗಳನ್ನು ವಿಲೇವಾರಿ ಮಾಡಲಾಗಿದೆ. ಆನ್ಲೈನ್ ನಲ್ಲಿ 59.528 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪೌತಿ ಖಾತೆ ಆಂದೋಲನದಲ್ಲಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮುಂದೆಯೂ ಸದರಿ ಸ್ಥಾನವನ್ನು ಕಾಪಾಡಿಕೊಳ್ಳಲಗುವುದು ಎಂದು ಹೇಳಿದರು.

ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸದರಿ ವರ್ಷ ಜಿಲ್ಲೆಯಲ್ಲಿ 14 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು ಈಗಾಗಲೇ 9 ಅರ್ಹ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 4 ಪ್ರಕರಣಗಳು ತಿರ್ಮಾನ ಮಾಡಲು ಬಾಕಿ ಇದು 1 ಪ್ರಕರಣ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಕೆ.ಆರ್.ನಂದಿನಿ ಅವರು ಮಾತನಾಡಿ ಬೂದು ನೀರು ನಿರ್ವಹಣೆಯಲ್ಲಿ 1012 ಗುರಿ ಇದ್ದು ಇಲ್ಲಿಯವರೆಗೂ 687 ಕಾಮಗಾರಿಗಳನ್ನು. ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ವೃದ್ಧಿಸಲು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬರುವ ಸಂಭವನೀಯ ಪ್ರಶ್ನೆಗಳ ಬುಕ್ ಲೇಟ್ ( ಸ್ಟೂಡೆಂಟ್ ಕಾರ್ನರ್) ಮಾಡಿ ಮಕ್ಕಳಿಗೆ ಕಲಿಕೆ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಟಿ ಮಂಜು, ವಿಧಾನಪರಿಷತ್ ಶಾಸಕ ಕೆ. ವಿವೇಕಾನಂದ, ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ ಪ್ರಕಾಶ್, ಮೈಶುಗರ್ ಅಧ್ಯಕ್ಷ ಸಿ.ಡಿ ಗಂಗಾಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ,ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, , ಕೆ.ಡಿ.ಪಿ ನಾಮ ನಿರ್ದೇಶನ ಸದಸ್ಯರುಗಳಾದ ನಟರಾಜು, ಆಶಾ, ದೇವಪ್ಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Minister, N. Chaluvarayaswamy, instructs , compensation, Mandya