ಅಕ್ರಮವಾಸಿಗಳಿಗೆ ಮನೆ: ಕಾಂಗ್ರೆಸ್ ಸರ್ಕಾರದ ವಿರುದ್ದ ಗುಡುಗಿದ JDS

ಬೆಂಗಳೂರು, ಡಿಸೆಂಬರ್, 30,2025 (www.justkannada.in):  ಬೆಂಗಳೂರಿನ ಕೋಗಿಲು ಕ್ರಾಸ್ ಬಡಾವಣೆಯಲ್ಲಿ ಅಕ್ರಮ ಶೆಡ್​​ ಗಳ ತೆರವು ಅಲ್ಲಿನ ನಿರಾಶ್ರಿತರಿಗೆ ಮನೆ ಪರಿಹಾರ ನೀಡಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯ ಜೆಡಿಎಸ್ ಟ್ವೀಟ್ ಮಾಡಿ ಕಿಡಿಕಾರಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ‘ಇದೊಂದು ಪ್ರಕರಣಕ್ಕೆ ಮಾತ್ರ ಸೀಮಿತ’ ಎಂದು ತಿಪ್ಪೇ ಸಾರುವ ಕೇರಳಿಗರ ಚೇಟಾ ಸಿದ್ದರಾಮಯ್ಯ ಅವರ ವಸತಿ ರಹಿತ ಕನ್ನಡಿಗರಿಗೆ ಮಿಡಿಯದ ಮಾನವೀಯತೆ, ಕೇರಳದ ಅಕ್ರಮ ವಲಸಿಗರಿಗೆ ಮಿಡಿಯುತ್ತಿರುವ ಇಬ್ಭಗೆ ನೀತಿಗೆ ಧಿಕ್ಕಾರವಿರಲಿ ಎಂದು ಹರಿಹಾಯ್ದಿದೆ.

ಹೈಕಮಾಂಡ್ ಆರ್ಡರ್‌ ಅನ್ನು ತಲೆಬಾಗಿ, ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿ ಅಕ್ರಮ ವಲಸಿಗರ ಪರವಾಗಿ, ತರಾತುರಿಯಲ್ಲಿ ಸಭೆಗಳನ್ನು ನಡೆಸಿ ಆದೇಶ ಹೊರಡಿಸಿ, ವಸತಿ ರಹಿತ ಕನ್ನಡಿಗರಿಗೆ ಬಗೆದ ವಿಶ್ವಾಸದ್ರೋಹವಲ್ಲವೇ? ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಹೆಚ್ಚು ವಸತಿರಹಿತ ಬಡ ಕನ್ನಡಿಗರಿಗೆ ಸೂರಿಲ್ಲ. ವಸತಿ ಇಲಾಖೆಯ ಮನೆ ಹಂಚಿಕೆಗಾಗಿ ಅರ್ಜಿ ಸಲ್ಲಿಸಿ ಲಕ್ಷಾಂತರ ಜನರು ಹಗಲು ರಾತ್ರಿ ದುಡಿದ ಹಣವನ್ನು ಮುಂಗಡ ಕಟ್ಟಿ, ವರ್ಷಾನುಗಟ್ಟಲೇ ಇನ್ನೂ ಕಾಯುತ್ತಿದ್ದಾರೆ. ಇಂತಹ ನಿರ್ಗತಿಕರಿಗೆ ಮನೆಗಳನ್ನು ನೀಡುವ ಮನಸ್ಸು ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಗಿದೆ’ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ವೋಟ್‌ ಬ್ಯಾಂಕ್‌ಗಾಗಿ ಒಂದು ಸಮುದಾಯದ ಓಲೈಕೆ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷ, ವಸತಿ ಸಚಿವ ಜಮೀರ್ ಅಹ್ಮದ್ ಕನ್ನಡಿಗರ ತೆರಿಗೆ ಹಣದಲ್ಲಿ ವಲಸಿಗರಿಗೆ 11.20 ಲಕ್ಷ ರೂ ವೆಚ್ಚದ ಮನೆಗಳನ್ನು ನೀಡಿ, ರಾಜ ಮಾರ್ಯಾದೆ ಕೊಡುತ್ತಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ವಂಚನೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

Key words: Houses, illegal immigrants, Congress, government, JDS