ಮೈಸೂರು,ಡಿಸೆಂಬರ್,29,2025 (www.justkannada.in): ಸ್ತನ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾದ ಲೇಖಕಿ ರಶ್ಮಿ ಜ್ವಾಲಾಕುಮಾರ್ ಅವರು ಮೈಸೂರಿನ ಭಾರತ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಅಂಕೊಲಾಜಿ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸಾಂತ್ವನ, ಧೈರ್ಯ ಮತ್ತು ಭರವಸೆಯನ್ನು ತುಂಬಿದರು.
ಇದೇ ಆಸ್ಪತ್ರೆಯಲ್ಲಿ ಈ ಹಿಂದೆ ಅವರ ತಾಯಿಯವರು ಸ್ತನ ಕ್ಯಾನ್ಸರ್ ಚಿಕಿತ್ಸೆ ಪಡೆದಿದ್ದ ಹಿನ್ನೆಲೆ ಅವರ ಭೇಟಿಗೆ ಇನ್ನಷ್ಟು ಭಾವನಾತ್ಮಕ ಸ್ಪರ್ಶ ನೀಡಿತು. ಈ ಸಂದರ್ಭ ಕೆಲ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಚಿಕಿತ್ಸೆಗಾಗಿ ಹಣಕಾಸು ನೆರವನ್ನೂ ಅವರು ಒದಗಿಸಿದರು.
ತಮ್ಮದೇ ಬದುಕಿನ ಕಠಿಣ ಅನುಭವಗಳಿಂದ ಶಕ್ತಿ ಪಡೆದ ರಶ್ಮಿ ಅವರು ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿ ಭಾವುಕ ಬೆಂಬಲ ನೀಡಿದರು. ಚೇತರಿಕೆಯ ತಮ್ಮ ಸ್ಪೂರ್ತಿದಾಯಕ ಪಯಣವನ್ನು ಹಂಚಿಕೊಂಡ ಅವರು, ಚಿಕಿತ್ಸೆ ಸಮಯದಲ್ಲಿ ಬರೆದ ತಮ್ಮ ಕೃತಿ ‘ಯು ವರ್ಸಸ್ ಯು – ಎ ವಾರಿಯರ್ಸ್ ವಾರ್ ವಿದಿನ್’ ಪುಸ್ತಕದ ಪ್ರತಿಗಳನ್ನು ರೋಗಿಗಳು ಮತ್ತು ಅವರ ಪಾಲಕರುಗಳಿಗೆ ಉಡುಗೊರೆಯಾಗಿ ನೀಡಿದರು. ಪುಸ್ತಕಗಳು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿವೆ.
ತಮ್ಮ ಪಯಣದ ಬಗ್ಗೆ ಮಾತನಾಡಿದ ರಶ್ಮಿ ಅವರು, ಸ್ತನ ಕ್ಯಾನ್ಸರ್ ಪತ್ತೆಯಾದ ನಂತರ ಎದುರಿಸಿದ ಸವಾಲುಗಳನ್ನು ಮುಕ್ತವಾಗಿ ಹಂಚಿಕೊಂಡರು. ಚೇತರಿಕೆಗೆ ಪತಿ, ಕುಟುಂಬಸ್ಥರು, ಸ್ನೇಹಿತರು ಮತ್ತು ವೈದ್ಯರ ಅಚಲ ಬೆಂಬಲವೇ ಕಾರಣವೆಂದು ಸ್ಮರಿಸಿದರು. ವೈದ್ಯಕೀಯ ಸಲಹೆಗಳನ್ನು ಪ್ರಾಮಾಣಿಕವಾಗಿ ಪಾಲಿಸುವಂತೆ ಮನವಿ ಮಾಡಿದ ಅವರು, “ಆರಂಭದಲ್ಲಿ ನನ್ನ ಪಯಣ ಸುಲಭವಾಗಿರಲಿಲ್ಲ. ಆದರೆ ನಂಬಿಕೆ ಮತ್ತು ಬೆಂಬಲದಿಂದ ಎಲ್ಲ ಅಡೆತಡೆಗಳನ್ನು ದಾಟಿ ಇಂದು ನಾನು ಸಾಮಾನ್ಯ ಜೀವನ ನಡೆಸುತ್ತಿದ್ದೇನೆ” ಎಂದು ಹೇಳಿದರು.
ತಮ್ಮ ಕೃತಿಯ ಕುರಿತು ವಿವರಿಸಿದ ಅವರು, ‘ಯು ವರ್ಸಸ್ ಯು’ (You Vs You) ಕೇವಲ ಆತ್ಮಚರಿತ್ರೆಯಲ್ಲ. ಸಂಕಷ್ಟದಲ್ಲಿರುವವರಿಗೆ ಭರವಸೆಯ ಬೆಳಕು ಎಂದರು. ಬ್ರೆಕಾ-ಪಾಸಿಟಿವ್, ಟ್ರಿಪಲ್ ನೆಗಟಿವ್ ಹಾಗೂ ಇಆರ್–ಪಿಆರ್ ಪಾಸಿಟಿವ್ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟವನ್ನು ಧೈರ್ಯ ಮತ್ತು ಪ್ರಾಮಾಣಿಕತೆಯಿಂದ ವಿವರಿಸುವ ಈ ಕೃತಿ, ಭಾರತೀಯ ಸಮಾಜದಲ್ಲಿನ ಕೆಲವು ಮುಜುಗರದ ವಿಷಯಗಳ ಮೇಲೂ ಬೆಳಕು ಚೆಲ್ಲುತ್ತದೆ. ಈ ಪುಸ್ತಕಗಳು ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿವೆ.
ನಿಜವಾದ ಹೋರಾಟ ನಮ್ಮೊಳಗಿನ ಭಯ ಮತ್ತು ಆತ್ಮಸಂದೇಹದ ವಿರುದ್ಧ” ಎಂಬ ಸಂದೇಶವನ್ನು ಈ ಕೃತಿ ಸಾರುತ್ತದೆ. ಮೂಲತಃ ಮೈಸೂರಿನವರಾದ ರಶ್ಮಿ ಅವರು ಪ್ರಸ್ತುತ ಅಮೆರಿಕದಲ್ಲಿ ಪತಿ ಮತ್ತು ಅವಳಿ ಮಕ್ಕಳೊಂದಿಗೆ ನೆಲೆಸಿದ್ದು, ರಜೆಯ ನಿಮಿತ್ತ ಮೈಸೂರಿಗೆ ಆಗಮಿಸಿದ್ದಾರೆ. ಹೆಚ್ಚಿನ ಜನರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಈ ಕೃತಿಯನ್ನು ಶೀಘ್ರದಲ್ಲೇ ಕನ್ನಡಕ್ಕೆ ಅನುವಾದಿಸುವುದಾಗಿ ಅವರು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಚ್.ಐ.ಓ. ಆಸ್ಪತ್ರೆಯ ಸಿಒಒ ಗೌತಮ್ ಧಮೇರ್ಲ ಅವರು, ಅಗತ್ಯವಿರುವ ರೋಗಿಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ತಮ್ಮ ಮಾತುಗಳಿಂದ ರೋಗಿಗಳು ಮತ್ತು ಕುಟುಂಬಗಳಲ್ಲಿ ಆತ್ಮವಿಶ್ವಾಸ ಮೂಡಿಸಿರುವ ರಶ್ಮಿ ಅವರ ಸೇವೆಯನ್ನು ಶ್ಲಾಘಿಸಿದರು.
Key words: Author, Rashmi Jwalakumar, cancer, Mysore







