ಮೈಸೂರು, ಡಿಸೆಂಬರ್,23,2025 (www.justkannada.in): ನೈತಿಕತೆ ಹಾಗೂ ಸಾಕ್ಷ್ಯಾಧಾರಿತ ಚಿಕಿತ್ಸಾ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಅಗತ್ಯವಿದೆ ಎಂದು ಖಾಸಗಿ ಆಡಿಯಾಲಜಿ ತಜ್ಞರಾದ ಡಾ. ಕಲ್ಯಾಣಿ ಮಾಂಡ್ಕೆ ತಿಳಿಸಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH), ಮೈಸೂರು, ಇಂಡಿಯನ್ ಸ್ಪೀಚ್ ಲ್ಯಾಂಗ್ವೇಜ್ ಅಂಡ್ ಹಿಯರಿಂಗ್ ಅಸೋಸಿಯೇಷನ್ ನ ಮೈಸೂರು ಶಾಖೆ (MyISHA) ಸಹಯೋಗದಲ್ಲಿ ಆಯಿಷ್ ಆವರಣದಲ್ಲಿ “ಹಿಯರಿಂಗ್ ಹಾರಿಜಾನ್ಸ್ 2025” ಎಂಬ ಎರಡು ದಿನಗಳ ಆರ್‌ಸಿಐ ಅನುಮೋದಿತ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 200 ಅನುಭವಿ ವೃತ್ತಿಪರರು ಮತ್ತು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಯುವ ಆಡಿಯಾಲಜಿಸ್ಟ್ ಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ, ಶ್ರವಣ ಆರೋಗ್ಯ ರಕ್ಷಣೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು, ಸವಾಲುಗಳು ಮತ್ತು ಭವಿಷ್ಯದ ದಿಕ್ಕುಗಳ ಕುರಿತು ಚರ್ಚೆ ನಡೆಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖಾಸಗಿ ಆಡಿಯಾಲಜಿ ತಜ್ಞರಾದ ಡಾ. ಕಲ್ಯಾಣಿ ಮಾಂಡ್ಕೆ ಅವರು, ದೇಶದಲ್ಲಿ ಶ್ರವಣ ಆರೈಕೆ ಕ್ಷೇತ್ರವು ಕಳೆದ ದಶಕಗಳಲ್ಲಿ ಕಂಡಿರುವ ವಿಕಸನವನ್ನು ವಿವರಿಸಿ, ನೈತಿಕತೆ ಹಾಗೂ ಸಾಕ್ಷ್ಯಾಧಾರಿತ ಚಿಕಿತ್ಸಾ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಅಗತ್ಯವಿದೆ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಡಾ. ಬಿ. ಮೊಹಮ್ಮದ್ ಅಶೀಲ್ ಅವರು ಮಾತನಾಡಿ, ಶ್ರವಣವು ಪರಿಣಾಮಕಾರಿ ಸಂವಹನದ ಮೂಲಾಧಾರವಾಗಿದ್ದು, ಮಕ್ಕಳ ಭಾಷಾ ಮತ್ತು ಮಾತು ಬೆಳವಣಿಗೆಯಿಂದ ಹಿಡಿದು ವಯಸ್ಕರು ಹಾಗೂ ಹಿರಿಯ ನಾಗರಿಕರ ಸಾಮಾಜಿಕ ಭಾಗವಹಿಸುವಿಕೆವರೆಗೆ ಶ್ರವಣ ಸಾಧನಗಳು ಜೀವನಪೂರ್ತಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಆಯಿಷ್ ನಿರ್ದೇಶಕಿ ಡಾ. ಎಂ. ಪುಷ್ಪಾವತಿ ಅವರು ಮಾತನಾಡಿ, ಶ್ರವಣ ಸಾಧನ ಅಳವಡಿಕೆಯೊಂದಿಗೆ ಚಿಕಿತ್ಸೆ ಪೂರ್ಣಗೊಳ್ಳುವುದಿಲ್ಲ, ವಿಶೇಷವಾಗಿ ಮಕ್ಕಳಲ್ಲಿ ಸಾಧನ ಅಳವಡಿಕೆಯ ನಂತರದ ವಾಕ್–ಭಾಷಾ ಚಿಕಿತ್ಸೆ ಮತ್ತು ವ್ಯವಸ್ಥಿತ ಶ್ರವಣ ಪುನರ್ವಸತಿ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು. ಇದರಿಂದಲೇ ಮಕ್ಕಳಲ್ಲಿ ಪರಿಣಾಮಕಾರಿ ಭಾಷಾ, ಸಂವಹನ ಮತ್ತು ಶೈಕ್ಷಣಿಕ ಕೌಶಲಗಳ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
ಸಮ್ಮೇಳನದ ಸಂಯೋಜಕರಾದ ಡಾ. ಎಂ. ಸಂದೀಪ್ ಎಂ ಮತ್ತು ಡಾ. ಎನ್. ದೇವಿ ಎನ್ ಅವರು, ಶೈಕ್ಷಣಣಿಕ ಸಂಸ್ಥೆಗಳು ಮತ್ತು ಖಾಸಗಿ ವೃತ್ತಿಪರರ ನಡುವಿನ ಅಂತರವನ್ನು ಕಡಿಮೆ ಮಾಡುವುದು, ಪರಸ್ಪರ ಜ್ಞಾನ ವಿನಿಮಯವನ್ನು ಉತ್ತೇಜಿಸುವುದು ಹಾಗೂ ದೇಶಾದ್ಯಂತ ಏಕರೂಪದ ಉತ್ತಮ ಚಿಕಿತ್ಸಾ ಪದ್ಧತಿಗಳನ್ನು ರೂಪಿಸುವುದು ಹಿಯರಿಂಗ್ ಹಾರಿಜಾನ್ಸ್ 2025ರ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಎಲ್ಲಾ ವಯೋಮಾನದವರನ್ನು ತಟ್ಟುತ್ತಿರುವ ಶ್ರವಣ ದೋಷದ ಹೆಚ್ಚುತ್ತಿರುವ ಹೊರೆಯನ್ನು ಸಮ್ಮೇಳನ ಗಂಭೀರವಾಗಿ ಚರ್ಚಿಸಿತು. ಪತ್ತೆಯಾಗದೆ ಅಥವಾ ಚಿಕಿತ್ಸೆ ಪಡೆಯದೆ ಉಳಿಯುವ ಶ್ರವಣ ದೋಷವು ಶಿಕ್ಷಣ, ಉದ್ಯೋಗ, ಮಾನಸಿಕ ಆರೋಗ್ಯ ಮತ್ತು ಜೀವನಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದರು.
ಆಡಿಯಾಲಜಿಸ್ಟ್ಗಳ ಬದಲಾಗುತ್ತಿರುವ ಪಾತ್ರ, ಹಿಂದುಳಿದ ಸಮುದಾಯಗಳಿಗೆ ತಲುಪುವ ಸೇವೆಗಳು, ನೈತಿಕ ವೈದ್ಯಕೀಯ ಅಭ್ಯಾಸ ಮತ್ತು ಶ್ರವಣ ಆರೈಕೆಯಲ್ಲಿ ಕೃತಕ ಬುದ್ಧಿಮತ್ತೆ (AI)ಯ ಬಳಕೆಯ ಸಾಧ್ಯತೆಗಳನ್ನೂ ಸಮ್ಮೇಳನದಲ್ಲಿ ಪರಿಶೀಲಿಸಲಾಯಿತು. ಶ್ರವಣ ಆರೋಗ್ಯಕ್ಕೆ ಆದ್ಯತೆ ನೀಡುವುದು, ಶೀಘ್ರ ತಪಾಸಣೆ ನಡೆಸುವುದು ಮತ್ತು ಅರ್ಹ ಆಡಿಯಾಲಜಿಸ್ಟ್‌ಗಳ ಸಮಯೋಚಿತ ಸಮಾಲೋಚನೆ ಪಡೆಯುವುದರ ಮೂಲಕ ಶ್ರವಣ ದೋಷದ ದೀರ್ಘಕಾಲೀನ ಸಾಮಾಜಿಕ ಪರಿಣಾಮವನ್ನು ಕಡಿಮೆ ಮಾಡಬೇಕೆಂಬ ಬಲವಾದ ಸಂದೇಶದೊಂದಿಗೆ ಸಮ್ಮೇಳನ ಮುಕ್ತಾಯವಾಯಿತು.
Key words: Hearing Horizons 2025, AIISH, Dr. Kalyani Mandke







