ಹುಲಿಗಳ ಸೆರೆಗೆ ದುಬಾರೆಯ ಸಾಕಾನೆಗಳು: ಇಂದಿನಿಂದ ಕಾರ್ಯಾಚರಣೆ

ಚಾಮರಾಜನಗರ. ಡಿಸೆಂಬರ್, 23,2025 (www.justkannada.in): ತಾಲ್ಲೂಕಿನ ನಂಜೇದೇವನಪುರ ಸಮೀಪದ ಆನೆಮಡುವಿನಕೆರೆ ಬಳಿ ಶುಕ್ರವಾರ ರಾತ್ರಿ 5 ಹುಲಿಗಳು ಓಡಾಟ ನಡೆಸಿರುವ ಸಂಬಂಧ ಹುಲಿಗಳ ಸೆರೆ ಗೆದುಬಾರೆ ಆನೆ ಶಿಬಿರದಿಂದ ಎರಡು ಸಾಕಾನೆಗಳು ಬಂದಿಳಿದಿವೆ.

ಗ್ರಾಮದ ಕುಮಾರಸ್ವಾಮಿ ಎಂಬವರ ಜಮೀನಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಹುಲಿಗಳ ಓಡಾಟ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ ಆಗಿದೆ.

ನಂಜೇದೇವನಪುರ ಬಳಿ ಇರುವ ಆನೆ ಮಡುವಿನ ಕೆರೆ ಈ ಹಿಂದೆಯೂ ಈ ಭಾಗದಲ್ಲಿ ಹುಲಿಗಳ ಓಡಾಟ ಕಂಡುಬಂದಿತ್ತು. ಆ ಸಂದರ್ಭದಲ್ಲಿ ಅರಣ್ಯಇಲಾಖೆಯಿಂದ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಯಾವುದೇ ಹುಲಿ ಸೆರೆಯಾಗಿರಲಿಲ್ಲ. ಆದರೆ, ಈಗ ಒಟ್ಟಿಗೆ 5 ಹುಲಿಗಳು ಕಾಣಿಸಿಕೊಂಡಿವೆ.

ವಿಷಯ ತಿಳಿದು ಸ್ಥಳಕ್ಕೆ ಬಿಆರ್‍ಟಿ ಹುಲಿ ಸಂರಕ್ಷಿತಾರಣ್ಯದ ಸಹಾಯಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಿಸಿ ಕ್ಯಾಮರಾ ಹಾಗೂ ಸುತ್ತಮುತ್ತ ಡ್ರೋನ್ ಮೂಲಕ ಹುಲಿಗಳ ಇರುವಿಕೆ ಕುರಿತು ಪರಿಶೀಲನೆ ನಡೆಸಿದರು. ಹುಲಿಗಳನ್ನು ಶೀಘ್ರದಲ್ಲೇ ಸೆರೆಹಿಡಿದು, ಇತ್ತ ಅವುಗಳು ಬಾರದಂತೆ ಪರಿಹಾರ ಸೂಚಿಸಬೇಕು ಎಂದು ಇದೇ ವೇಳೆ ಗ್ರಾಮಸ್ಥರು ಬಿಆರ್‍ಟಿ ಹುಲಿ ಸಂರಕ್ಷಿತಾರಣ್ಯದ ಸಹಾಯಕ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದರು.

ಈ ಸಂಬಂಧ ಬಿಆರ್‍ಟಿ ಡಿಸಿಎಫ್ ಅವರ ಸೂಚನೆ ಮೇರೆಗೆ ಹುಲಿ ಸೆರೆ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಲಕ್ಷ್ಮಣ, ಈಶ್ವರ್ ಎಂಬ ಸಾಕಾನೆಗಳು ಲಾರಿಗಳ ಮೂಲಕ ನಂಜೆದೇವನಪುರಕ್ಕೆ ಬಂದಿದ್ದು, ಇಂದು ವಿಶ್ರಮಿಸಿ, ಮಂಗಳವಾರ ಹುಲಿ ಸೆರೆ ಕಾರ್ಯಾಚರಣೆಗೆ ಆನೆಗಳು ತೆರಳಲಿವೆ.

144ನೇ ಸೆಕ್ಷನ್‍ ಜಾರಿ; ಹುಲಿಗಳ ಸೆರೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜನರು ಒಂದೇ ಕಡೆ ಗುಂಪುಗೂಡಬಾರದು, ಮೆರವಣಿಗೆ, ಸಮಾರಂಭ ರಸ್ತೆತಡೆ ಚಳವಳಿ ನಡೆಸದಂತೆ ಡಿ.22 ಹಾಗೂ ಡಿ.23ರಂದು ಬೆಳಗ್ಗೆ 6ರಿಂದ ಸಂಜೆ 6ರವರಗೆ 144ನೇ ಸೆಕ್ಷನ್‍ ನಿಷೇಧಾಜ್ಞೆ ವಿಧಿಸಿ, ಚಾಮರಾಜನಗರ ತಹಶೀಲ್ದಾರ್ ಬಿ.ಗಿರಿಜಾ ಆದೇಶ ಹೊರಡಿಸಿದ್ದಾರೆ.

ನಂಜೇದೇವನಪುರದಿಂದ 3 ಕಿಮೀ ದೂರವಿರುವ ಕಲ್ಪುರಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಹುಲಿ ಕಾಣಿಸಿಕೊಂಡು, ಗ್ರಾಮದ ಕುಮಾರ್ ಎಂಬವರ ಜಮೀನಿಗೆ ನುಗ್ಗಿ ಎರಡು ಹಸುಗಳನ್ನು ಕೊಂದು ಹಾಕಿತ್ತು. ಹುಲಿ ಸೆರೆಗಾಗಿ ಒಂದು ವಾರಗಳ ಕಾಲ ಅರಣ್ಯಇಲಾಖೆಯವರು ಎರಡು ಸಾಕಾನೆ ಬಳಸಿಕೊಂಡು ಬೋಳುಗುಡ್ಡ ಸುತ್ತಮುತ್ತಲ  ಜಮೀನುಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು.

ಅದರೂ ಹುಲಿ ಪತ್ತೆಯಾಗಲಿಲ್ಲ. ಎರಡು ತಿಂಗಳ ಅಂತರದಲ್ಲೇ ಒಂದಲ್ಲ, ಎರಡಲ್ಲ. ಬರೋಬ್ಬರಿ 5 ಹುಲಿಗಳು ಕಾಣಿಸಿಕೊಂಡಿರುವುದು ಕೃಷಿ ಚಟುವಟಿಕೆ ಕೈಗೊಳ್ಳುವ ರೈತರು ಭಯಬೀಳುವ ಸ್ಥಿತಿ ಉಂಟಾಗಿದೆ.

ನಂಜೇದೇವನಪುರ ಬಳಿ ಇರುವ ಆನೆ ಮಡುವಿನ ಕೆರೆ ಬಳಿಯ ಕುಮಾರಸ್ವಾಮಿ ಎಂಬವರ ಜಮೀನಿನಲ್ಲಿ 5 ಹುಲಿಗಳು ಓಡಾಟದ ಬಗ್ಗೆ ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಹುಲಿಗಳ ಓಡಾಟದ ಬಗ್ಗೆ ಮಾಹಿತಿ ಪಡೆದು, ಹುಲಿಗಳ ಸೆರೆಗೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆಯೂ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Key words: tiger, capture, Elephant, Today, operation