ಕುಂಬಳಕಾಯಿ ಕಳ್ಳ ಅಂದ್ರೆ, ಮುಟ್ನೊಡ್ಕೊಳ್ಳೊದು ಯಾಕೆ..?; ಸಿಎಂ ವ್ಯಂಗ್ಯ

ಮೈಸೂರು,ಡಿಸೆಂಬರ್,22,2025 (www.justkannada.in): ಪ್ರಚೋದನಕಾರಿ ಭಾಷಣ ತಡೆ ಕಾಯ್ದೆಯಿಂದ ಪ್ರಚೋದನಾಕಾರಿ ಭಾಷಣ ಮಾಡಿರೋರಿಗೆ ಸಮಸ್ಯೆ ಆಗುತ್ತೆ. ಕುಂಬಳಕಾಯಿ ಕಳ್ಳ ಅಂದರೆ ಬಿಜೆಪಿ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ  ಸಿಎಂ ಸಿದ್ದರಾಮಯ್ಯ, ಈ ಬಾರಿ ಸದನ ಚೆನ್ನಾಗಿ ಆಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಿದೆ. ಪ್ರಚೋದನಕಾರಿ ಭಾಷಣ ತಡೆ ಕಾಯ್ದೆ ಎಲ್ಲರಿಗೂ ಅನ್ವಯ ಆಗುತ್ತದೆ. ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಎಲ್ಲರಿಗೂ ಈ ಕಾನೂನು ಅನ್ವಯ ಆಗತ್ತದೆ. ಇಂತಹ ಪ್ರಚೋದನಕಾರಿ ಭಾಷಣದಿಂದ ಸಮಾಜದಲ್ಲಿ ಶಾಂತಿ ಕಾಪಾಡಲು ಆಗುತ್ತಾ? ಬಿಜೆಪಿ ಅವರು ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ. ಅದಕ್ಕೆ ಅವರು ಈ ಕಾನೂನಿಗೆ ವಿರೋಧ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು.

ಗೃಹಲಕ್ಷ್ಮಿ ಹಣ ಬಂದಿಲ್ಲ ಎನ್ನುವ ಬಿಜೆಪಿ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈವರೆಗೂ 23 ತಿಂಗಳು ಹಣ ಕೊಟ್ಟಿದ್ದೇವೆ. ಹಣ ಲಪಟಾಯಿಸಲು ಹೇಗೆ ಸಾಧ್ಯ? ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತೆ. ಗೃಹಲಕ್ಷ್ಮಿ ಹಣ ಯಾರು ಲಪಟಾಯಿಸಲು ಆಗಲ್ಲ ಎಂದರು.

ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಹೌದು, ಖರ್ಗೆ ಹೇಳಿಕೆ ಸರಿಯಿದೆ. ಪಕ್ಷಕ್ಕಿಂತ ಯಾರು ದೊಡ್ಡವರಿಲ್ಲ. ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ನಾವು ತೀರ್ಮಾನ ಮಾಡುತ್ತೇವೆ ಅಂತ ಹೇಳಿದ್ದಾರೆ. ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಮಾಧ್ಯಮಗಳಿಂದ ಇಷ್ಟೊಂದು ಚರ್ಚೆ ಆಗುತ್ತಿದೆ.  ಅಧಿಕಾರ ಹಂಚಿಕೆ ಹೈ ಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ರಾಜ್ಯದಲ್ಲಿ ಯಾವ ಕ್ರಾಂತಿನೂ ಇಲ್ಲ. ಬಜೆಟ್  ಸಿದ್ಧತೆ ಬಗ್ಗೆ ಆ ಮೇಲೆ ಹೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Mysore, CM Siddaramaiah, BJP, pumpkin