ದ್ವೇಷ ಭಾಷಣ ಕಾಯ್ದೆ ಮೂಲಕ ವಾಕ್‌ ಸ್ವಾತಂತ್ರ್ಯ  ದಮನ – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು,ಡಿಸೆಂಬರ್,20,2025 (www.justkannada.in):  ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ ಜಾರಿ ಮಾಡುವ ಮೂಲಕ ಕಾಂಗ್ರೆಸ್‌‍  ಸರ್ಕಾರ ವಾಕ್‌ ಸ್ವಾತಂತ್ರ್ಯ  ದಮನ  ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,  ಈ ಕಾಯ್ದೆ ಮೂಲಕ ಜನರ ವಾಕ್‌ ಸ್ವಾತಂತ್ರ್ಯವನ್ನು ದಮನ ಮಾಡಲು ಸರ್ಕಾರ ಮುಂದಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕೆಲವರ ಬಾಯಿ ಮುಚ್ಚಿಸಬಹುದೆಂಬ ಭ್ರಮೆ ಬೇಡ.  ನೀವು ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಿ ನೋಡೋಣ ಹಾಕಿಬಿಡಿ ಎಂದು ವಾಗ್ದಾಳಿ ನಡೆಸಿದರು.

ಸುಪ್ರೀಂಕೋರ್ಟ್‌ ಈ ಹಿಂದೆ ಕೇಶವನಂದಿ ಕೇಸ್‌‍ ನಲ್ಲಿ ಸ್ಪಷ್ಟವಾಗಿ ಹೇಳಿದೆ. ನ್ಯಾಯಾಂಗ ಮಾಡಬೇಕಾದ ಕೆಲಸವನ್ನು ಕಾರ್ಯಾಂಗ ಮಾಡಲು ಹೊರಟಿದೆ. ಈ ವಿಧೇಯಕದ ಆಧಾರದ ಮೇಲೆ ನಾಳೆ ಯಾರೋ ಮಾತನಾಡಬಹುದು ಎಂದು ಅನ್ನಿಸಿದರೆ ಅವರನ್ನು ಮೊದಲ ದಿನವೇ ಬಂಧನ ಮಾಡಬಹುದು ಎಂದು ಹರಿಹಾಯ್ದರು.

ಸಿಎಂ ಬದಲಾವಣೆ ವಿಚಾರ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಇವರು ಕುರ್ಚಿ ಆಟದಲ್ಲೇ ಮುಳುಗಿದ್ದಾರೆ. ಮ್ಯೂಸಿಕನ್‌ ಚೇರ್‌ ಆಟ ಅಷ್ಟೇ ನಡೆಯುತ್ತಿದೆ. ಕೃಷ್ಣ ಭೈರೇಗೌಡ ಭೂಮಿಯನ್ನು ನುಂಗಿದ್ದಾರೆ. ನೀವು ಕಂದಾಯ ಸಚಿವರಾದ ಮೇಲೆ ಯಾಕೆ ದಾಖಲೆ ಸೃಷ್ಟಿ ಆಯಿತು? ಇವರ ಬಗ್ಗೆ ನಾವು ಮಾತಾಡಬಾರದು ಎಂದು ವಿಧೇಯಕ ತಂದಿದ್ದಾರೆ ಎಂದು ಗುಡುಗಿದರು.

Key words: Hate Speech Act, suppresses, freedom of speech