ಮೈಸೂರು: ಡಿ.22 ರಿಂದ ಭಕ್ತರಿಗೆ ಆಯೋಧ್ಯೆ ‘ಶ್ರೀರಾಮ ದರ್ಶನ’ ಯಾತ್ರೆ

ಮೈಸೂರು,ಡಿಸೆಂಬರ್,20,2025 (www.justkannada.in):  ಉತ್ತರಪ್ರದೇಶದ ಪ್ರಮುಖ ಧಾರ್ಮಿಕ ಕೇಂದ್ರ ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರ ಹಾಗೂ ಅಲ್ಲಿನ ‘ಬಾಲರಾಮ’ನ ವಿಗ್ರಹವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆಂದು ಇಲ್ಲೊಂದು ಸುವರ್ಣಾವಕಾಶ ಕಲ್ಪಿಸಲಾಗಿದೆ.

ಹೌದು  ಇಲ್ಲಿನ ಅವಧೂತ ದತ್ತಪೀಠದ ಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ‘ರಾಮಲಲ್ಲಾ ದರ್ಶನ ಯಾತ್ರೆ’ ಆಯೋಜಿಸಲಾಗಿದೆ.  ಡಿಸೆಂಬರ್ 22ರಿಂದ ಡಿಸೆಂಬರ್ 27ರವರೆಗೆ ಈ ಯಾತ್ರೆ ಆಯೋಜಿಸಲಾಗಿದ್ದು, ಅವಧೂತ ದತ್ತ ಪೀಠದಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಅವಕಾಶ ಇದೆ. ಒಂದು ಸಾವಿರ ಭಕ್ತರನ್ನು ರೈಲಿನಲ್ಲಿ ಉಚಿತವಾಗಿ ಕರೆದುಕೊಂಡು ಹೋಗಿ, ವಾಪಸ್ ತಂದುಬಿಡುವ ಕಾರ್ಯಕ್ರಮ ಇದಾಗಿದೆ.  ಅಯೋಧ್ಯೆಯ ಶ್ರೀರಾಮಮಂದಿರವನ್ನು ನೋಡಬೇಕು, ಅಲ್ಲಿ ನಮನ ಸಲ್ಲಿಸಬೇಕು ಎಂಬ ಬಯಕೆ ಭಕ್ತರಿಗೆ ಇರುತ್ತದೆ. ಆದರೆ, ದೂರದ ಆ ತಾಣಕ್ಕೆ ಹೋಗಿಬರುವುದಕ್ಕೆ ಆರ್ಥಿಕವಾಗಿ ಅನುಕೂಲ ಇರುವುದಿಲ್ಲ. ಇದರಿಂದಾಗಿ ಬೇಸರಕ್ಕೆ ಒಳಗಾಗುವ ‘ನಿಜವಾದ ಭಕ್ತರಿಗೆ ಮಾತ್ರ ಯಾತ್ರೆ ಕರೆದೊಯ್ಯಲು  ನಿರ್ಧರಿಸಲಾಗಿದೆ.

ಗಣಪತಿ, ಸಚ್ಚಿದಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಎಲ್ಲ ಸಿದ್ಧತೆಯನ್ನೂ ನಡೆಸಲಾಗಿದ್ದು ಇದಕ್ಕಾಗಿ ಪ್ರತ್ಯೇಕ ರೈಲಿನ ವ್ಯವಸ್ಥೆಯನ್ನೇ ಮಾಡಿಕೊಳ್ಳಲಾಗಿದೆ. ನೋಂದಾಯಿತ ಭಕ್ತರು ಅದರಲ್ಲಿ ಪ್ರಯಾಣಿಸಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ‘ಸಾವಿರ ಮಂದಿ ದತ್ತಭಕ್ತರು ಹಾಗೂ ಶ್ರೀರಾಮನ ಭಕ್ತರನ್ನು ಅಯೋಧ್ಯೆಗೆ ಕರೆದೊಯ್ಯಲಾಗುತ್ತಿದೆ. ಮೈಸೂರಿನವರೇ ಆದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿ ಪ್ರತಿಷ್ಠಾಪನೆ ಮಾಡಲಾಗಿರುವ ರಾಮಲಲ್ಲಾ (ಬಾಲರಾಮನಮೂರ್ತಿ) ನೋಡಬೇಕು ಎಂದು ಬಯಸುವವರಿಗೆ ನೆರವಾಗುತ್ತಿದ್ದೇವೆ. ಡಿ.22ರಿಂದ 27ರವರೆಗೆ ಯಾತ್ರೆ ನಡೆಯಲಿದೆ. ಡಿ.24ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಅಲ್ಲಿ ರಾಮಪರಿವಾರ ಪ್ರತಿಷ್ಠೆ, ರಾಮತಾರಕ ಹೋಮ ನಡೆಸಲಾಗುವುದು. ಮೈಸೂರಿನಿಂದ ತೆರಳುವ ಭಕ್ತರ ವಾಸ್ತವ್ಯಕ್ಕೆಂದು 300 ಕೊಠಡಿಗಳನ್ನು ಪಡೆದುಕೊಂಡಿದ್ದೇವೆ. ಊಟ, ಉಪಾಹಾರವನ್ನೂ ಉಚಿತವಾಗಿ ಒದಗಿಸಲಾಗುವುದು. ಚಳಿಯ ಕಾರಣದಿಂದಾಗಿ ಹೊದಿಕೆಯನ್ನೂ ನೀಡಲಾಗುವುದು. ಶ್ರೀರಾಮಮಂದಿರದಲ್ಲಿ ಸುಗಮವಾಗಿ ರಾಮಲಲ್ಲಾ ದರ್ಶನಕ್ಕಾಗಿಯೂ ಅನುಮತಿ ಮೊದಲಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಬೇರೆ ಬೇರೆ ರಾಜ್ಯಗಳ ದತ್ತ ಮತ್ತು ಶ್ರೀರಾಮನ ಭಕ್ತರು ಕೂಡ ಬಂದು ನಮ್ಮನ್ನು ಕಾರ್ಯಕ್ರಮದಲ್ಲಿ ಸೇರಿಕೊಳ್ಳಲಿದ್ದಾರೆ.ಅಮೆರಿಕ, ಜರ್ಮನಿ ಮೊದಲಾದ ಕಡೆಗಳ ಭಕ್ತರು ಬರುತ್ತಿದ್ದಾರೆ. ಇನ್ಮುಂದೆ, ಪ್ರತಿ ವರ್ಷ ಸಾವಿರ ಮಂದಿಗೆ ಅಯೋಧ್ಯೆಯಾತ್ರೆ-ಯನ್ನು ಹಮ್ಮಿಕೊಳ್ಳುವ ಉದ್ದೇಶವಿದೆ’ ಎಂದು ತಮ್ಮ ಯೋಜನೆ ಬಗ್ಗೆ ತಿಳಿಸಿದರು.

‘ನಾನು ಇದೇ ಮೊದಲ ಬಾರಿಗೆ ಅಷ್ಟು ದೂರ ರೈಲಿನಲ್ಲಿ ಹೋಗುತ್ತಿದ್ದೇನೆ. ಚೆನ್ನೈ, ಬೆಂಗಳೂರಿಗೆ ರೈಲಿನಲ್ಲಿ ಹೋಗಿದ್ದೆ. ಈಗ ಭಕ್ತರೊಂದಿಗೆ ರೈಲಿನಲ್ಲಿ ಅಯೋಧ್ಯೆಗೆ ಹೋಗುತ್ತಿದ್ದೇನೆ. ರೈಲ್ವೆ ಇಲಾಖೆಯಿಂದ ನನಗೆಂದೇ ಪ್ರತ್ಯೇಕ ಬೋಗಿಯನ್ನು ವಿಶೇಷವಾದ ಸೌಲಭ್ಯಗಳೊಂದಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಸಹಕಾರದಿಂದ ಇದು ಸಾಧ್ಯವಾಗಿದೆ. ಒಂದು ಕಡೆಯಿಂದ ಎರಡೂವರೆ ದಿನಗಳ ಪ್ರಯಾಣ ಇರಲಿದೆ’ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

Key words: Mysore, Ayodhya ‘Shri Ram Darsha,  pilgrimage, devotees