ಮೈಸೂರು,ಡಿಸೆಂಬರ್,19,2025 (www.justkannada.in): ಇಲವಾಲದಲ್ಲಿ ಅನಾವರಣ ಮಾಡಬೇಕಿದ್ದ ರೈತ ನಾಯಕ ದಿ. ಕೆ.ಎಸ್ ಪುಟ್ಟಣ್ಣಯ್ಯ ಪ್ರತಿಮೆ ಕಳುವು ಪ್ರಕರಣ ಇದೀಗ ಸುಖಾಂತ್ಯ ಕಂಡಿದೆ.
ಕಳವಾಗಿದ್ದ ಪುಟ್ಟಣ್ಣಯ್ಯ ಪ್ರತಿಮೆ ಇದೀಗ ಪೊಲೀಸ್ ಠಾಣೆಯಲ್ಲಿಯೇ ಇದ್ದು, ಇಲವಾಲ ಠಾಣೆ ಪೊಲೀಸರೇ ಪ್ರತಿಮೆಯನ್ನು ತಂದು ಇಟ್ಟುಕೊಂಡಿದ್ದರು ಎನ್ನಲಾಗಿದೆ. ಕೆ.ಎಸ್ ಪುಟ್ಟಣ್ಣಯ್ಯ ಪ್ರತಿಮೆ ಕಳವಾದ ಬೆನ್ನಲ್ಲೆ ರೈತರು ಹೋರಾಟ ನಡೆಸಿದ್ದು. ಇಲವಾಲ ಠಾಣೆ ಬಳಿ ಜಮಾಯಿಸಿದ್ದ ಹಿನ್ನೆಲೆ ರೈತರ ಪ್ರತಿಭಟನೆಗೆ ಹೆದರಿ ಪೊಲೀಸರು ಪ್ರತಿಮೆ ವಿಷಯ ಬಾಯ್ಬಿಟ್ಟಿದ್ದು, ಅನುಮತಿ ಪಡೆಯದೆ ಅನಾವರಣ ಮಾಡುತ್ತೀರಿ ಅಂತ ತಂದಿಟ್ಟುಕೊಂಡಿದ್ದೆವು ಸರ್ಕಾರಿ ಸ್ಥಳದಲ್ಲಿ ಅನಾವರಣ ಮಾಡಲು ಅವಕಾಶವಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಪೊಲೀಸರ ನಡೆಗೆ ರೈತ ಮುಖಂಡರು ಆಕ್ರೋಶ ಹೊರ ಹಾಕಿದ್ದು, ರೈತರ ಪ್ರತಿಭಟನೆ ಕಂಡು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್, ಇಲವಾಲದ ಸರ್ಕಾರಿ ಸ್ಥಳದಲ್ಲಿ ಕೆ.ಎಸ್ ಪುಟ್ಟಣ್ಣಯ್ಯ ಪ್ರತಿಮೆ ನಿರ್ಮಾಣಕ್ಕೆ ಅಸ್ತು ಎಂದಿದ್ದಾರೆ. ತಹಶೀಲ್ದಾರ್ ಮನವಿ ಮೇರೆಗೆ ಪ್ರತಿಭಟನೆ ಅಂತ್ಯಗೊಂಡಿದ್ದು, ಡಿಸೆಂಬರ್ 23 ರಂದು ನಿಗದಿತ ಸಮಯದಲ್ಲೇ ಇಲವಾಲದಲ್ಲಿಯೇ ಪ್ರತಿಮೆ ಅನಾವರಣ ಮಾಡಲು ತೀರ್ಮಾನಿಸಲಾಗಿದೆ. ತಹಶೀಲ್ದಾರ್ ಮನವಿ ಮೇರೆಗೆ ರೈತ ಹೋರಾಟಗಾರರು ಪ್ರತಿಮೆ ವಾಪಸ್ ಪಡೆದು ತೆರಳಿದ್ದಾರೆ.
Key words: K.S. Puttannaiah, statue, found, Mysore







