ಬೀಳುವ ಸ್ಥಿತಿಯಲ್ಲಿ ಡಿ.ದೇವರಾಜ ಅರಸು ಮನೆ: ಅಭಿವೃದ್ಧಿ ಹರಿಕಾರನ ಮನೆಗೆ ಬೇಕಿದೆ ಕಾಯಕಲ್ಪ

ಮೈಸೂರು,ಡಿಸೆಂಬರ್,18,2025 (www.justkannada.in):  ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರ ಮಾಜಿ ಸಿಎಂ ದಿ. ಡಿ.ದೇವರಾಜ ಅರಸು ಅವರು ಹುಟ್ಟಿದ ಮನೆ ಮತ್ತು ಸಮಾಧಿ ಇದೀಗ ಬೀಳುವ ಹಂತಕ್ಕೆ ತಲುಪಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿರುವ ಡಿ.ದೇವರಾಜ ಅರಸು ಅವರ ಮನೆ ಸೋರುತಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳ ದಿವ್ಯನಿರ್ಲಕ್ಷ್ಯದಿಂದಾಗಿ ಮನೆ ಬೀಳುವ ಹಂತಕ್ಕೆ ತಲುಪಿದೆ. ದೇವರಾಜ ಅರಸು ಅವರ ಸಮಾಧಿ ಸ್ಥಳ ಸಹ ಬೀಳುವ ಸ್ಥಿತಿಯಲ್ಲಿದೆ. ಹೀಗಾಗಿ  ಕಾಂಗ್ರೆಸ್ ಧುರೀಣ ಮಾಜಿ ಸಿಎಂ ದೇವರಾಜ ಅರಸು ಮನೆಗೆ ಇದೀಗ ಕಾಯಕಲ್ಪ ಮಾಡಬೇಕಿದೆ.

ಅಭಿವೃದ್ಧಿ ಹರಿಕಾರನ ಮನೆ, ಸಮಾಧಿಯಲ್ಲೇ ಅಭಿವೃದ್ಧಿ ಇಲ್ಲದಂತಾಗಿದ್ದು, ರಾಜಕಾರಣಿಗಳ ಬರೀ ಬಾಯಿ ಮಾತಲ್ಲಿ‌ ಉಳಿದು ಹೋದರಾ ಡಿ.ದೇವರಾಜ ಅರಸು? ಎಂಬಂತಾಗಿದೆ. ಭಾಷಣದಲ್ಲಷ್ಟೇ ಉಳಿದ ಅಹಿಂದ ನಾಯಕ ಡಿ.ದೇವರಾಜ ಅರಸು ಎಂಬ ಪ್ರಶ್ನೆ ಎದ್ದಿದೆ.

ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗ ಕಲ್ಲಹಳ್ಳಿ ಅಭಿವೃದಿಗೆ 10 ಕೋಟಿ ರೂ. ಬಿಡುಗಡೆ ಮಾಡಿದ್ದರು. ಆದರೆ ಅಧಿಕಾರಿಗಳು ಸ್ವಲ್ಪ ಮಟ್ಟಿನ ರಸ್ತೆ ಮಾಡಿ ಕೈತೊಳೆದುಕೊಂಡರು. ಇದೀಗ ದೇವರಾಜ ಅರಸು ಹುಟ್ಟಿದ ಮನೆ ಹಾಗೂ ಸಮಾಧಿ ಬೀಳುವ ಸ್ಥಿತಿ ತಲುಪಿದೆ.

ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಲ್ಲಹಳ್ಳಿ ಗ್ರಾಮಸ್ಥರು, ಚುನಾವಣೆ ಸಮಯದಲ್ಲಿ ಮಾತ್ರ ಗ್ರಾಮಕ್ಕೆ ರಾಜಕಾರಣಿಗಳು ಭೇಟಿ  ನೀಡುತ್ತಾರೆ. ಕೇವಲ ಹೆಸರಿಗೆ ಮಾತ್ರ ದೇವರಾಜ ಅರಸು ಹೆಸರು ಬಳಕೆ ಮಾಡುತ್ತಿದ್ದಾರೆ. ಕೇವಲ ವೋಟ್ ಬ್ಯಾಂಕಿಗಾಗಿ ದೇವರಾಜ ಅರಸು ಅವರ ಹೆಸರು ಬಳಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಊರನ್ನು ಸಮಗ್ರ ಅಭಿವೃದ್ಧಿ ಮಾಡಬೇಕು. ದೇವರಾಜ ಅರಸು ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು. ಗ್ರಾಮದ ಸಮಗ್ರ ಅಭಿವೃದ್ಧಿ ಮಾಡುವಂತೆ ಕಲ್ಲಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Key words: D.Devaraj Urs, house, dilapidated, condition, Mysore