ಮೈಸೂರು,ಡಿಸೆಂಬರ್,17,2025 (www.justkannada.in): ಗಾಂಜಾ ಮತ್ತಿನಲ್ಲಿ ಗಲಾಟೆ ನಡೆದು ಓರ್ವ ಯುವಕನ ಕೊಲೆಯಲ್ಲಿ ಗಲಾಟೆ ಅಂತ್ಯವಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆ ನಿವಾಸಿ ಕಲಾಂ ಅಲಿಯಾಸ್ ಮಹಮ್ಮದ್ ರಫೀಕ್ (24) ಕೊಲೆಯಾದ ಯುವಕ. ಔಹಿದ್ ಪಾಷ ಎಂಬಾತನೇ ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮೃತ ಕಲಾಂಗೆ ನಿಶ್ಚಿತಾರ್ಥವಾಗಿ ಎರಡು ತಿಂಗಳಲ್ಲಿ ವಿವಾಹ ನೆರವೇರಬೇಕಿತ್ತು.
ಮೃತ ಕಲಾಂ ಆರೋಪಿ ಔಹಿದ್ ಪಾಷನಿಗೆ ಕೊಡಬೇಕಿದ್ದ ಹಣದ ವಿಚಾರವಾಗಿ ಜಗಳ ಆರಂಭಗೊಂಡಿತ್ತು. ಮೊಬೈಲ್ ನಲ್ಲಿ ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡ ಕೆಲವೇ ಕ್ಷಣದಲ್ಲಿ ಶಿವಾಜಿ ರಸ್ತೆಗೆ ಔಹಿದ್ ಆಗಮಿಸಿದ್ದು, ಶಿವಾಜಿ ರಸ್ತೆಯಲ್ಲಿ ಗುಂಪಿನಲ್ಲಿದ್ದ ಕಲಾಂ ತಲೆಗೆ ಔಹಿದ್ ದೊಣ್ಣೆಯಿಂದ ಥಳಿಸಿದ್ದಾನೆ.
ಈ ವೇಳೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಕಲಾಂ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದು, ಕೂಡಲೇ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಕಲಾಂ ತಡರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
Key words: Mysore, Riot, murder, young man







