ಮುಡಾ ನಿವೇಶನ: 300 ಎಕರೆ ಜಾಗ ಗುರುತು, ನಿಯಮಾನುಸಾರ ಹಂಚಿಕೆಗೆ ಕ್ರಮ- ಸಚಿವ ಭೈರತಿ ಸುರೇಶ್

ಬೆಳಗಾವಿ,ಡಿಸೆಂಬರ್,9,2025 (www.justkannada.in):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಮಾಡುವ ಸಲುವಾಗಿ ಮೈಸೂರಿನಲ್ಲಿ 300 ಎಕರೆ ಜಾಗವನ್ನ ಗುರುತಿಸಲಾಗಿದೆ. ನಿಯಮಾನುಸಾರ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ದಿ ಇಲಾಖೆ ಸಚಿವ ಭೈರತಿ ಸುರೇಶ್ ಭರವಸೆ ನೀಡಿದರು.

ಚಳಿಗಾಲ ಅಧಿವೇಶನದಲ್ಲಿ ಇಂದು ಪ್ರಶ್ನೋತ್ತರ ಅವಧಿಯ ವೇಳೆ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್ ಅವರು ಮುಡಾ ನಿವೇಶನ ಹಂಚಿಕೆ ವಿಚಾರ ಕುರಿತು ಪ್ರಶ್ನೆ ಕೇಳಿದರು.  ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ನಿವೇಶನ ಹಂಚಿಕೆ ಮಾಡುತ್ತಿಲ್ಲ. ಸಾಮಾನ್ಯ ಜನರಿಗೆ ನಿವೇಶನಗಳು ಸಿಗುತ್ತಿಲ್ಲ. ಆದರೆ, ಹೌಸಿಂಗ್ ಸೊಸೈಟಿಗಳಿಗೆ ನಿವೇಶನ ಸಿಗುತ್ತಿವೆ. ಜಾತಿವಾರು ಹೌಸಿಂಗ್ ಸೊಸೈಟಿಗಳಿಗೆ ನಿವೇಶನ, ಜಮೀನು ಕೊಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಭೈರತಿ ಸುರೇಶ್,  ನಿವೇಶನ ಹಂಚಿಕೆ ವಿಚಾರದಲ್ಲಿ ಆದ ಬೆಳವಣಿಗೆಯಿಂದ ಮುಡಾ ಕಚೇರಿಗೆ ಗರ ಬಡಿದಂತಿತ್ತು. ಇದೀಗ ನ್ಯಾಯಾಲಯದಿಂದ ಆದೇಶಗಳು ಬಂದಿದ್ದು, ಹೊಸ ಬಡಾವಣೆ ರಚಿಸಲು ಅನುಮೋದನೆ ಸಿಕ್ಕಿದೆ. ಹೀಗಾಗಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ಮಾಡಿ ಹೊಸ ಬಡಾವಣೆ ಮಾಡಲು ಅನುಮತಿ ಪಡೆದು 300 ಎಕರೆ ಸ್ಥಳ ಗುರುತಿಸಲಾಗಿದೆ. ಪ್ರಾಧಿಕಾರಗಳು ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ಲಭ್ಯವಿರುವ ನಿವೇಶನಗಳ ಬಗ್ಗೆ ಜಾಹೀರಾತು ನೀಡಲಾಗಿದೆ. ನಿವೇಶನ ಹಂಚಿಕೆ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ 10 ವರ್ಷಗಳ ಬಳಿಕ ನಿವೇಶನದಾರರಿಗೆ ಸೇಲ್ ಡೀಡ್ ಮಾಡಿಕೊಡಲಾಗುವುದು ಎಂದರು.

ರಾಜ್ಯ ನಗರಾಭಿವೃದ್ಧಿ ಇಲಾಖೆಯಿಂದ ಬಳ್ಳಾರಿ, ಬೀದರ್, ಚಾಮರಾಜನಗರ, ಮಂಗಳೂರು, ಕಲಬುರಗಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಕರ್ನಾಟಕ ನಗರಾಭಿವೃದ್ಧಿ ನಿವೇಶನ ಹಂಚಿಕೆ ನಿಯಮಗಳಂತೆ ಹಿಂದುಳಿದವರಿಗೆ ಶೇ.2, ಅಧಿಸೂಚಿತ ಬುಡಕಟ್ಟು ಜನಾಂಗಕ್ಕೆ ಶೇ.3ರಷ್ಟು ಅಧಿಸೂಚಿತ ಜಾತಿಗಳಿಗೆ ಶೇ.15ರಷ್ಟು ಕೇಂದ್ರ ಸಶಸ್ತ್ರ ಪಡೆಗಳ ಸೈನಿಕರಿಗೆ ಶೇ.5ರಷ್ಟು ಹಾಗೂ ಸಾರ್ವಜನಿಕರಿಗೆ ಶೇ.55ರಷ್ಟು ಮೀಸಲಾತಿಯಂತೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು

ಹಾಗೆಯೇ ಕಲಾಪದಲ್ಲಿ ಎಂಎಲ್ ಸಿ ಕೆ.ಶಿವಕುಮಾರ್ ಮಾತನಾಡಿ, ಗಂಗಾ ನದಿ ಶುದ್ಧೀಕರಣ ಯೋಜನೆಯಂತೆ ಕಾವೇರಿ ನದಿ ಶುದ್ಧೀಕರಣವಾಗಬೇಕಿದೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್ ಟಿಪಿ) ನಿರ್ಮಿಸದ ಪರಿಣಾಮ ಕಾವೇರಿ ನದಿಯು ಕಲುಷಿತಗೊಂಡಿದ್ದು ಎಸ್​ಟಿಪಿ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಭೈರತಿ ಸುರೇಶ್,  ಮೈಸೂರು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದ್ದು, ಸ್ವಚ್ಛ ಭಾರತ್ ಯೋಜನೆಯಡಿ ರಾಜ್ಯದಲ್ಲಿ 236 ಹಾಗೂ ಎನ್​ಜಿಟಿಯಡಿ 52 ಎಸ್​ಟಿಪಿಗಳನ್ನು ನಿರ್ಮಿಸಲಾಗುತ್ತಿದೆ  ಮಾಹಿತಿ ನೀಡಿದರು.

Key words: Muda site,  MLC, K.Shivakumar, Minister, Bhairati Suresh