ಬೆಳಗಾವಿ,ಡಿಸೆಂಬರ್,8,2025 (www.justkannada.in): ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಯಾಗಿ ವರ್ಷಗಳೇ ಕಳೆದಿದೆ. ಈ ಮಧ್ಯೆ ರಾಜ್ಯದಲ್ಲಿ ಒಟ್ಟು 18 ಸಾವಿರ ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎಂದು ಹಲವು ದಿನಗಳಿಂದಲೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳುತ್ತಲೇ ಬಂದಿದ್ದು ಆದರೆ ನೇಮಕಾತಿ ಆರಂಭವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ವಿಚಾರ ಇದೀಗ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪವಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ವಿಳಂಬದ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶೀಲ್ ನಮೋಶಿ ಪ್ರಸ್ತಾಪಿಸಿದರು. 2015ರ ನಂತರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಆಗಿಲ್ಲ. 2024ರಲ್ಲಿ ಶಾಲಾ ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಿದರು. ಆದರೆ ಒಳಮೀಸಲಾತಿ ಕಾರಣಕ್ಕೆ ನೇಮಕಾತಿ ಸ್ಥಗಿತ ಆಗಿದೆ. ಖಾಲಿ ಇರುವ ಶಿಕ್ಷಕ ಹುದ್ದೆಗಳನ್ನು ಯಾವಾಗ ಭರ್ತಿ ಮಾಡುತ್ತೀರಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆಯಿಂದ ನಿರ್ಬಂಧವಿಲ್ಲ. ಆದರೂ ವಿಳಂಬ ಯಾಕೆ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಸಮಸ್ಯೆ ಇಲ್ಲ. ಖಾಲಿ ಹುದ್ದೆಗಳ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಆಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ಶಿಕ್ಷಕರ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇ ಎಂಎಲ್ ಸಿ ವಿ. ಎಸ್ ಸಂಕನೂರು ಅವರು ಮಧ್ಯಪ್ರವೇಶಿಸಿ ಪ್ರಾಥಮಿಕ ಶಾಲೆ ಶಿಕ್ಷಕರ ಹುದ್ದೆ ಭರ್ತಿಗೆ ಅನುಮತಿ ಕೊಟ್ಟಿಲ್ಲ 1600 ಅನುದಾನಿತ ಶಾಲಾ ಶಿಕ್ಷಕರ ಭರ್ತಿಗೆ ಅನುಮತಿ ಕೊಡಿ ಎಂದು ಮನವಿ ಮಾಡಿದರು.
Key words: Legislative Council, government teachers, recruitment, Education Minister







