ದುಬಾರಿ ವಾಚ್: ಛಲವಾದಿ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ನೇರ ಸವಾಲು

ಬೆಂಗಳೂರು,ಡಿಸೆಂಬರ್,5,2025 (www.justkannada.in): ದುಬಾರಿ ವಾಚ್ ಕದ್ದದ್ದೋ, ಕೊಂಡದ್ದೋ ಎಂಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ  ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, “ನಾನು ನನ್ನ ವಾಚ್ ವಿಚಾರವಾಗಿ ಲೋಕಾಯುಕ್ತ ಸೇರಿದಂತೆ ಎಲ್ಲೆಲ್ಲಿ ಮಾಹಿತಿ ನೀಡಬೇಕೋ, ಎಲ್ಲಾ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಸುಳ್ಳು ಹೇಳಿದ್ದರೆ ಇಂದೇ ರಾಜೀನಾಮೆ ನೀಡುತ್ತೇನೆ ಇಲ್ಲವಾದರೆ ಚಲವಾದಿ ನಾರಾಯಣಸ್ವಾಮಿ ಅವರು ರಾಜೀನಾಮೆ ನೀಡುತ್ತಾರಾ?  ಎಂದು ನೇರಸವಾಲು ಹಾಕಿದರು.

“ನಾರಾಯಣಸ್ವಾಮಿ ಅವರಿಗೆ ಇನ್ನೂ ಅನುಭವವಿಲ್ಲ. ಯಾವುದಾದರೂ ವಿಚಾರದ ಬಗ್ಗೆ ಮಾತನಾಡಬೇಕಾದರೆ ಕನಿಷ್ಟ ಪರಿಜ್ಞಾನ ಇರಬೇಕು. ಬರೀ ಪ್ರಚಾರಕ್ಕೆ ಮಾತನಾಡುವುದಲ್ಲ. ಅವರೂ ಜವಾಬ್ದಾರಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕು., ಅವರೇ ಹೋಗಿ ಲೋಕಾಯುಕ್ತದಲ್ಲಿ ಪರಿಶೀಲನೆ ಮಾಡಲಿ. ಅಲ್ಲಿ ಸಲ್ಲಿಸಿರುವ ಆದಾಯ ಅಫಿಡವಿಟ್ ಸಾರ್ವಜನಿಕ ದಾಖಲೆಯಾಗಿದ್ದು, ಅದನ್ನು ಅವರೂ ಪಡೆಯಬಹುದು ಎಂದು ಡಿಕೆ ಶಿವಕುಮಾರ್ ಹೇಳಿದರು.

ಈ ವಿಚಾರವನ್ನ ಸದನದಲ್ಲೂ ಪ್ರಸ್ತಾಪಿಸಲಿ,  ಯಾರು ಬೇಡ ಎನ್ನುತ್ತಾರೆ. ದೇಶದೆಲ್ಲೆಡೆ ಚರ್ಚೆ ಮಾಡಲಿ. ನನ್ನ ದಾಖಲೆ ಅವರಿಗೆ ತೋರಿಸುವ ಅಗತ್ಯವಿಲ್ಲವಾದರೂ ನಾನು ಆ ವಾಚ್ ಕದ್ದಿದ್ದೇನೆ ಎಂದು ಹೇಳಿದ್ದಕ್ಕೆ ತೋರಿಸಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: Expensive watch,  DCM, DK Shivakumar, challenge, Chalavadi, Narayanaswamy