ಬೆಂಗಳೂರು,ಡಿಸೆಂಬರ್,3,2025 (www.justkannada.in): ಮುಕ್ತ ಪ್ರವೇಶ (ಓಪನ್ ಆಕ್ಸೆಸ್) ಗ್ರಾಹಕರ ಮೇಲೆ ಬೆಸ್ಕಾಂ ವಿಧಿಸಲು ಯೋಚಿಸಿರುವ ಹೆಚ್ಚುವರಿ ಶುಲ್ಕವನ್ನು (ಸರ್ ಚಾರ್ಜ್) ಎಫ್‌ಕೆಸಿಸಿಐ ವಿರೋಧಿಸಿದೆ.
ಮುಕ್ತ ಪ್ರವೇಶ ಗ್ರಾಹಕರ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಬೆಸ್ಕಾಂ ಕೋರಿರುವ ಅರ್ಜಿಯನ್ನು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (FKCCI), ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ತೀವ್ರವಾಗಿ ವಿರೋಧಿಸಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತನ್ನ ಹೆಚ್ಚುವರಿ ಶುಲ್ಕದ ದರವನ್ನು ₹1.65 ರಿಂದ ₹0.58ಕ್ಕೆ ಏಕಾಏಕಿ ಬದಲಾಯಿಸಿರುವುದು ಪಾರದರ್ಶಕತೆಯ ಕೊರತೆಯನ್ನು ಸೂಚಿಸುತ್ತಿದೆ ಎಂದು ಎಫ್‌ಕೆಸಿಸಿಐ ಸ್ಪಷ್ಟಪಡಿಸಿದೆ. ಹೆಚ್ಚುವರಿ ಶುಲ್ಕದ ಕುರಿತು ರೂಪಿಸಬೇಕಾದ ಸ್ಪಷ್ಟ ನಿಯಮಾವಳಿಗಳನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಸೂಚಿಸಿದ್ದರೂ, ಅವು ಇನ್ನೂ ಜಾರಿಗೆ ಬಂದಿಲ್ಲ ಎಂಬ ವಿಷಯವನ್ನೂ ಸಹ ಎಫ್‌ಕೆಸಿಸಿಐ ಕೆ ಇಆರ್‌ಸಿ ಗಮನಕ್ಕೆ ತಂದಿದೆ.
ರಾಷ್ಟ್ರೀಯ ವಿದ್ಯುತ್ ತೆರಿಗೆ ನೀತಿ ಹಾಗೂ ಮೇಲ್ಮನವಿ ನ್ಯಾಯಮಂಡಳಿ (APTEL) ತೀರ್ಪುಗಳ ಪ್ರಕಾರ, ವೋಲ್ಟೇಜ್ ಮಟ್ಟದ ‘ಸ್ಟ್ರಾಂಡೆಡ್ ಕ್ಯಪಾಸಿಟಿ’ ಸಾಬೀತಾದಾಗ ಮಾತ್ರ ಇಂತಹ ಹೆಚ್ಚುವರಿ ಶುಲ್ಕ ವಿಧಿಸಬಹುದು ಎಂದು ಎಫ್‌ಕೆಸಿಸಿಐ ಪುನರುಚ್ಚಿಸಿದೆ.
ಬೆಸ್ಕಾಂ ಈ ಸಂಬಂಧ ಯಾವುದೇ ಸಾಕ್ಷಿ ಅಥವಾ ದತ್ತಾಂಶಗಳನ್ನು (ಡೇಟಾ) ಸಲ್ಲಿಸದಿರುವುದರಿಂದ, ಈ ಅರ್ಜಿಯನ್ನು ತಿರಸ್ಕರಿಸುವಂತೆ ಕೆಇಆರ್‌ಸಿಗೆ ಎಫ್‌ಕೆಸಿಸಿಐ ಮನವಿ ಮಾಡಿದೆ. ಗ್ರಾಹಕರ ಹಿತವನ್ನು ಕಾಪಾಡಿ, ಕಡಿಮೆ ವೆಚ್ಚದ ವಿದ್ಯುತ್ ಪಡೆಯುವ ಓಪನ್ ಆಕ್ಸೆಸ್ ಹಕ್ಕುಗಳ ಮೇಲೆ ಯಾವುದೇ ನಿರ್ಬಂಧ ಬಾರದಂತೆ ಕ್ರಮ ಕೈಗೊಳ್ಳುವಂತೆ ಎಫ್‌ಕೆಸಿಸಿಐ ಒತ್ತಾಯಿಸಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷರಾದ ಉಮಾ ರೆಡ್ಡಿ ತಿಳಿಸಿದ್ದಾರೆ.
Key words: Additional charges, open access customers, BESCOM, decision, FKCCI, opposes







