ರೈತರ ಸೋಲಾರ್‌ ನೀರಾವರಿ ಪಂಪ್‌ ಸೆಟ್‌ ಗೆ ಶೇ.80 ಸಬ್ಸಿಡಿ: ಕುಸುಮ್‌-ಬಿ ಯೋಜನೆ ಲಾಭ ಪಡೆಯಲು ಸೆಸ್ಕ್‌ ಮನವಿ

ಮೈಸೂರು: ಡಿಸೆಂಬರ್,3, 2025 (www.justkannada.in): ಹಗಲು ವೇಳೆಯಲ್ಲಿ ನೀರಾವರಿಗೆ ವಿದ್ಯುತ್‌ ಸೌಕರ್ಯವನ್ನು ಒದಗಿಸುವ ಮಹತ್ವಾಕಾಂಕ್ಷಿ ಪಿ.ಎಂ. ಕುಸುಮ್-ಬಿ ಯೋಜನೆಯಡಿ ಸೋಲಾರ್ ಪಂಪ್‌-ಸೆಟ್‌ ಪಡೆದುಕೊಳ್ಳಲು ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್‌ ರಾಜು, ಸೌರಶಕ್ತಿ ಬಳಕೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ಕರ್ನಾಟಕ ಸರ್ಕಾರವು ರೈತರು ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಲು ‘ಕುಸುಮ್ ಬಿ’ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿ ರೈತರು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ.

ಕುಸುಮ್-ಬಿ ಯೋಜನೆ ಅಡಿಯಲ್ಲಿ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ರೂಪಿಸಲಾಗಿದೆ. ಆ ಮೂಲಕ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸಲು, ಸೌರಶಕ್ತಿ ಬಳಕೆಯ ಉತ್ತೇಜನಕ್ಕೆ ಶೇ.80ರಷ್ಟು ಸಹಾಯಧನ ನೀಡಲಾಗುತ್ತಿದೆ. ಕುಸುಮ್-ಬಿ ಯೋಜನೆಯಡಿ ಜಾಲ ಮುಕ್ತ ಸೌರ ಕೃಷಿ ಪಂಪ್‌ ಸೆಟ್ ಅಳವಡಿಸಲು ಒತ್ತು ನೀಡಲಾಗಿದೆ. ಈ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಶೇ.50, ಕೇಂದ್ರ ಸರ್ಕಾರ ಶೇ.30 ಮತ್ತು ಫಲಾನುಭವಿಗಳು ಶೇ.20 ಮೊತ್ತವನ್ನು ಪಾವತಿಸಬೇಕಿದೆ.

ರಾಜ್ಯದಲ್ಲಿ MNRE ಮತ್ತು KREDL ಸಹಯೋಗದೊಂದಿಗೆ ರೈತರ ಜಮೀನಿನ ಕೊಳವೆ/ತೆರೆದ ಬಾವಿಗಳಿಗೆ ಸೋಲಾರ್‌ ಪಂಪ್‌-ಸೆಟ್‌ ಗಳನ್ನು ಅಳವಡಿಸಲು ರೈತರಿಂದ ಅರ್ಜಿಗಳನ್ನು ಆನ್‌ ಲೈನ್‌ ಮೂಲಕವಾಗಿ www.souramitra.com ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.  ಸದರಿ ಪೋರ್ಟಲ್‌ ಮೂಲಕ ಸೋಲಾರ್‌ ಪಂಪ್‌-ಸೆಟ್‌ಗಳ ಅಳವಡಿಕೆಗಾಗಿ ರೈತರು www.souramitra.com ಪೋರ್ಟಲ್‌ನಲ್ಲಿ ಅರ್ಜಿ ನೋಂದಾಯಿಸಿ, ವೆಂಡರ್‌/ಏಜೆನ್ಸಿಯನ್ನು ಆಯ್ಕೆ ಮಾಡಿಕೊಂಡು, ಶೇ.20 ಹಣವನ್ನು ಪಾವತಿಸಬೇಕಿದೆ ಎಂದು ತಿಳಿಸಿದ್ದಾರೆ.

ರೈತರು, ಪಿಎಂ ಕುಸುಮ್‌-ಬಿ ಯೋಜನೆಗೆ ಸಂಬಂಧಿಸಿದಂತೆ, www.kreld.karnataka.gov.in ವೆಬ್‌ಸೈಟ್‌ ನಲ್ಲಿ ಹೊರಡಿಸಿದ ಪ್ರಕಟಣೆ/ಮಾಹಿತಿಗಳನ್ನು ಮಾತ್ರ ಪರಿಗಣಿಸಲು ಕೋರಲಾಗಿದೆ. ಸೌರ ಪಂಪ್‌ ಸೆಟ್‌ ನೋಂದಣಿ ಹಾಗೂ ಪಾವತಿಗೆ ಸಂಬಂಧಿಸಿದಂತೆ www.souramitra.com ನಲ್ಲಿ ಹಾಗೂ KREDLನ ಸಹಾಯವಾಣಿ 080-22202100/8095132100 ಮುಖಾಂತರ ಅಥವಾ ಹತ್ತಿರದ ಚಾವಿಸನಿನಿ ಕಚೇರಿ/ಅಧಿಕಾರಿಗಳನ್ನು ಸಂಪರ್ಕಿಸಬಹುದು. ಸದರಿ ನೋಂದಣಿ ಪ್ರಕ್ರಿಯೆಯಲ್ಲಿ ಸ್ವೀಕೃತವಾಗುವ OTPಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ತಾವೇ ನೋಂದಾಯಿಸಿಕೊಳ್ಳಬೇಕು

ಹೆಚ್ಚಿನ ಮಾಹಿತಿಗಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ) ದೂರವಾಣಿ ಸಂಖ್ಯೆ 9449598669 ಸಂಪರ್ಕಿಸಬಹುದಾಗಿದೆ ಎಂದು ಮುನಿಗೋಪಾಲ್ ರಾಜು ತಿಳಿಸಿದ್ದಾರೆ.

ರೈತರಿಗೆ ಹಗಲು ವೇಳೆಯಲ್ಲಿ ಸೋಲಾ‌ರ್‌ ಪಂಪ್‌ ಸೆಟ್‌ ಮೂಲಕ ನೀರಾವರಿ ಸೌಕರ್ಯವನ್ನು ಒದಗಿಸುವಲ್ಲಿ ಕುಸುಮ್-ಬಿ ಯೋಜನೆ ಮಹತ್ವದ್ದಾಗಿದೆ. ಈ ಯೋಜನೆಯಲ್ಲಿ ರೈತರಿಗೆ ಶೇ.80 ಸಬ್ಸಿಡಿ ಸಿಗಲಿದೆ. ಈ ಯೋಜನೆ ಡಿಸೆಂಬರ್‌ ತಿಂಗಳಲ್ಲಿ ಕೊನೆಗೊಳ್ಳುವುದರಿಂದ ರೈತರು ಕೂಡಲೇ ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕಿದೆ ಎಂದು ಮುನಿಗೋಪಾಲ್ ರಾಜು ಮನವಿ ಮಾಡಿದ್ದಾರೆ.

Key words: 80% subsidy, solar irrigation, pump sets, CESC, Kusum-B scheme