ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ನಿಧನಕ್ಕೆ ಕೆಯುಡಬ್ಲೂಜೆ ಸಂತಾಪ

ಬೆಂಗಳೂರು,ನವೆಂಬರ್,28,2025 (www.justkannada.in): ಸುದ್ದಿ ಮನೆಯ ಹಿರಿಯ ಪತ್ರಕರ್ತರಾಗಿದ್ದ ಅ.ಚ.ಶಿವಣ್ಣ (85) ಅವರು ಬೆಂಗಳೂರು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪತ್ನಿ ಇಂದಿರಾ ಮತ್ತು ಓರ್ವ ಪತ್ರ ವಿಕ್ಟೋರಿಯಾ ಆಸ್ಪತ್ರೆ ಸೂಪರಿಟೆಂಡೆಂಟ್ ಡಾ.ದೀಪಕ್ ಶಿವಣ್ಣ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಎಪ್ಪತ್ತರ ದಶಕದಲ್ಲಿ ಲೋಕವಾಣಿ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ್ದ ಶಿವಣ್ಣ ಅವರು ಬಳಿಕ ಸಂಜೆವಾಣಿ ಪತ್ರಿಕೆಗೆ ಸೇರಿ 25 ವರ್ಷಗಳಿಗೂ ಹೆಚ್ಚು ಕಾಲ ವರದಿಗಾರಿಕೆ ಮಾಡಿದವರು. ರಾಜಕೀಯ ವರದಿಗಾರಿಕೆಯಲ್ಲಿಯೂ ಪರಿಣಿತರಾಗಿದ್ದವರು. ಆ ಕಾಲಘಟ್ಟದಲ್ಲಿಯೇ ವಾಕಿ ಟಾಕಿ ಬಳಸಿ ಸುದ್ದಿಕೊಡುತ್ತಿದ್ದ ಮೊದಲ ಪತ್ರಕರ್ತ ಎನ್ನುವುದು ಹೆಗ್ಗಳಿಕೆ.

ಮೃತರ ಅಂತ್ಯ ಸಂಸ್ಕಾರ ನ.29ರಂದು ಶನಿವಾರ ಮದ್ಯಾಹ್ನ 12ಕ್ಕೆ ಬನಶಂಕರಿ ಚಿತಾಗಾರದಲ್ಲಿ  ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೆಯುಡಬ್ಲೂಜೆ ಸಂತಾಪ

ಅವರು 84ನೇ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಅವರ ಮನೆಗೆ ತೆರಳಿ, ಮನೆಯಂಗಳದಲ್ಲಿಯೇ ಅವರಿಗೆ ಕೆಯುಡಬ್ಲೂೃಜೆ ಗೌರವ ನೀಡುವ ಕೆಲಸವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘವು ಮಾಡಿತ್ತು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

ಅ.ಚ.ಶಿವಣ್ಣ ಅಗಲಿಕೆಯಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ತಗಡೂರು ಪ್ರಾರ್ಥಿಸಿದ್ದಾರೆ

Key words: KUWJ, condoles, senior journalist, A.C. Shivanna