ಮೈಸೂರು,ನವೆಂಬರ್,26,2025 (www.justkannada.in): ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ 15 ವರ್ಷ ಪೂರೈಸಿ ತನ್ನದೇ ಆದ ಛಾಪು ಮೂಡಿಸಿರುವ ‘ಜಸ್ಟ್ ಕನ್ನಡ ಆನ್ ಲೈನ್ ದಿನಪತ್ರಿಕೆ’ಯ 15ನೇ ವಾರ್ಷಿಕೋತ್ಸವದ ಅಂಗವಾಗಿ ಗಣ್ಯರ ಸಮ್ಮುಖದಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ಮೈಸೂರು ವಿವಿಯ ಸೆಮಿನಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಎಸ್ ರಂಗಪ್ಪ, ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ , ವಿಜಯ ಕರ್ನಾಟಕ ಸುದ್ದಿ ಸಂಪಾದಕ ಚೀ.ಜ.ರಾಜೀವ್, ಕೆ.ಆರ್ ಆಸ್ಪತ್ರೆಯ ವೈದ್ಯ ಡಾ.ಯೋಗೀಶ್ ಮತ್ತು ಜಸ್ಟ್ ಕನ್ನಡ ಸಂಪಾದಕ ವಿ.ಮಹೇಶ್ ಕುಮಾರ್ ‘ಜಸ್ಟ್ ಕನ್ನಡ@15’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಪ್ರೊ.ಕೆ.ಎಸ್.ರಂಗಪ್ಪ ಅವರು, ಇಂದು ಜಸ್ಟ್ ಕನ್ನಡದ 15ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಬಹಳ ಸಂತಸದಿಂದ ಜಸ್ಟ್ ಕನ್ನಡದ ವಿಶೇಷ ಸಂಚಿಕೆಯನ್ನ ಬಿಡುಗಡೆ ಮಾಡಿದ್ದೇವೆ. ನಾನು ಸಾಕಷ್ಟು ದೇಶಗಳಲ್ಲಿ ವಿದ್ಯಾಭ್ಯಾಸ ಹಾಗೂ ಕೆಲಸ ಮಾಡಿ ಮಾದ್ಯಮಗಳನ್ನ ನೋಡಿ ಅವರ ಬರವಣಿಗೆಗಳನ್ನ ಕೂಡ ನೋಡಿದ್ದೇನೆ. ಆದರೇ ಎಲ್ಲೋ ಒಂದು ಕಡೆ ಎಡವುತಿದ್ದಾರೆ. ಇಂತಹ ಸಂದರ್ಭದಲ್ಲಿ ಜಸ್ಟ್ ಕನ್ನಡದ ಮಹೇಶರಂತ ಒಬ್ಬ ವ್ಯಕ್ತಿ ಇದ್ದಾರೆ ಎಂದರೆ ಬಹಳ ಆಶ್ಚರ್ಯ. ಜಸ್ಟ್ ಕನ್ನಡದಲ್ಲಿ ಒಂದು ದಿನವೂ ಊಹಾಪೋಹ ಸುದ್ದಿಗಳಾಗಲಿ, ಸತ್ಯಕ್ಕೆ ದೂರವಾದ ಬರವಣಿಗೆಯನ್ನೂ ನಾನು ನೋಡಿಲ್ಲ. ಮಾದ್ಯಮಗಳು ಕೋರ್ಟ್ ಇದ್ದ ಹಾಗೆ. ಜಡ್ಜ್ ಮೆಂಟ್ ಕೊಡುವ ರೀತಿಯಲ್ಲಿ ಮಾದ್ಯಮಗಳಿರಬೇಕು. ಆಗ ಮಾತ್ರ ನಮ್ಮ ದೇಶ ಮುಂದುವರೆಯಿತ್ತದೆ ಎಂದು ಕಿವಿಮಾತು ಹೇಳಿದರು.
ಹಿರಿಯ ಪತ್ರಕರ್ತ ಚೀ.ಜ.ರಾಜೀವ, ಜಸ್ಟ್ ಕನ್ನಡ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ನೂರು ವರ್ಷ ತುಂಬಿದಾಗ ಒಂದು ಸೀರೀಸ್ ಶುರು ಮಾಡಿತ್ತು. ಆಗ ಪ್ರೊ.ಕೆ.ಎಸ್.ರಂಗಪ್ಪನವರೇ ಕುಲಪತಿಯಾಗಿದ್ದರು. ಯೂನಿವರ್ಸಿಟಿ ನಡೆದು ಬಂದ ಹಾದಿ, ಮೊದಲ ಕುಲಪತಿಗಳು, ಎಲ್ಲಾ ಡಿಪಾರ್ಟ್ ಮೆಂಟ್ ಗಳ ಪರಿಚಯವನ್ನ ಜಸ್ಟ್ ಕನ್ನಡ ಮಾಡಿತ್ತು. ಸುಮಾರು 42 ವಿಭಾಗಗಳ ಪರಿಚಯವನ್ನ ಜಸ್ಟ್ ಕನ್ನಡ ಮಾಡಿತ್ತು. ಈ ವಿಷಯ ನನಗೆ ಬಹಳ ಆಶ್ಚರ್ಯವಾಗಿತ್ತು. ಇಂತಹ ಕೆಲಸಗಳನ್ನ ಮುಖ್ಯವಾಹಿನಿಯ ಪತ್ರಕರ್ತರು ಮಾಡಬೇಕಿತ್ತು. ಆದರೇ ಜಸ್ಟ್ ಕನ್ನಡ ಮಾಡಿದ್ದು ಬಹಳ ಸೋಜಿಗ ಆಯಿತು. ಜಸ್ಟ್ ಕನ್ನಡ ಬಹಳ ಸರಳವಾಗಿ ಬಹಳ ಮತಹತ್ತರ ಕೆಲಸಗಳನ್ನು ಮಾಡುತ್ತಾ ಬಂದಿದೆ. ಇದೇ ವೇಳೆ ಮೈಸೂರಿನಲ್ಲಿ ರಸ್ತೆ ಗುಂಡಿ ಬಗ್ಗೆ ಮಾಡಿದ್ದ ಸುದ್ದಿ ಮೈಸೂರಿಗೆ ಮುಜುಗರವನ್ನುಂಟು ಮಾಡಿತ್ತು. ಅದು ಜಸ್ಟ್ ಕನ್ನಡದ ಸಾಮರ್ಥ್ಯ ಎಂದು ಮೆಲುಕು ಹಾಕಿದರು. ನಾನೂ ಕೂಡ ಹೊರಗಡೆ ಇದ್ದಾಗ ಮೈಸೂರಿನ ಸುದ್ದಿಗಳಿಗಾಗಿ ಜಸ್ಟ್ ಕನ್ನಡವನ್ನೇ ನೋಡುತ್ತೇನೆ ಎಂದರು.
ಕೆ.ಆರ್ ಆಸ್ಪತ್ರೆ ಹಿರಿಯ ವೈಧ್ಯಾದೀಕಾರಿ ಡಾ.ಯೋಗೀಶ್ ಮಾತನಾಡಿ, ಜಸ್ಟ್ ಕನ್ನಡ ದಲ್ಲಿ ಸುದ್ದಿ ಪ್ರಕಟಣೆಗೂ ಮುನ್ನ ಅದರ ಸತ್ಯಾಸತ್ಯತೆ ಪರಿಶೀಲಿಸಿ ನಂತರ ಪ್ರಕಟಿಸುತ್ತಾರೆ. ಕ್ರೈಮ್ ನ್ಯೂಸ್ ಗಳ ಬಗ್ಗೆ ನಿಖರತೆಯನ್ನ ದೃಢಪಡಿಸಿಕೊಳ್ಳಲು ಹಲವು ಬಾರಿ ನನ್ನನ್ನ ಸಂಪರ್ಕಿಸಿದ್ದು ಇದಕ್ಕೆ ನಿದರ್ಶನ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಾಲಕಿ ಮೇಲಿನ ರೇಪ್ ಅಂಡ್ ಮರ್ಡರ್ ಪ್ರಕರಣದ ಕುರಿತು ಸರಕಾರಿ ಆಸ್ಪತ್ರೆ ವೈದ್ಯನಾಗಿ ನನಗೆ ಮಾಹಿತಿ ಲಭಿಸುವ ಮೊದಲೇ ಜಸ್ಟ್ ಕನ್ನಡದಲ್ಲಿ ಇಂಚಿಂಚೂ ಸುದ್ದಿ ಪ್ರಸಾರ ಆಗಿತ್ತು. ಹಾಗಾಗಿ ಇಂತಹ ವಿಷಯಗಳಿಂದ ನಾನು ಜಸ್ಟ್ ಕನ್ನಡಾಗೆ ಹತ್ತಿರವಾದೆ. ಜಸ್ಟ್ ಕನ್ನಡಗೆ ಸಾಮಾಜಿಕ ಬದ್ಧತೆ ಇದೆ. ಸತ್ಯದ ಹುಡುಕಾಟ, ಆಂತರಿಕ ಗೊಂದಲ, ಸಮಾಜ ಹಿತ ಚಿಂತನೆ, ಭಯ ಮತ್ತು ಸವಾಲುಗಳನ್ನ ಮೆಟ್ಟಿ ಜಸ್ಟ್ ಕನ್ನಡ 15ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ವಿಷಯ ಎಂದು ನುಡಿದರು.
ಹಿರಿಯ ವಕೀಲ ಅ.ಮಾ ಭಾಸ್ಕರ್ ಸ್ವಾಗತಿಸಿದರು, ಯಶಸ್ವಿನಿ ಮತ್ತು ಮೈಸೂರು ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿ ಪಾಂಡವಪುರ ಕಾರ್ಯಕ್ರಮ ನಿರೂಪಿಸಿದರು. ಜಸ್ಟ್ ಕನ್ನಡ ಸಂಪಾದಕ ವಿ.ಮಹೇಶ್ ಕುಮಾರ್ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಇ.ಸಿ ನಿಂಗರಾಜುಗೌಡ, ಡಾ. ಅನಿಲ್ ಥಾಮಸ್, ಪ್ರಭಾಕರ್ ಶಿಂಧೆ, ಮಾಜಿ ಕಾರ್ಪೋರೇಟರ್ ಗಳಾದ ಜಗದೀಶ್, ಕೆವಿ ಮಲ್ಲೇಶ್ , ಲೊಕೇಶ್ ಪಿಯಾ, ಕೆಎಸ್ ಒಯು ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ್ ಗೌಡ, ಲಾಗೈಡ್ ಮಾಸ ಪತ್ರಿಕೆಯ ಸಂಪಾದಕ ವೆಂಕಟೇಶ್, ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಗೌಡ, ಹಿರಿಯ ವಕೀಲ ಹರೀಶ್ ಹೆಗಡೆ ಸೇರಿ ಪತ್ರಕರ್ತರು, ಗಣ್ಯರು ಉಪಸ್ಥಿತರಿದ್ದರು.
Key words: Mysore, Just Kannada, 15th Anniversary, release,







