ಬೆಂಗಳೂರು,ನವೆಂಬರ್,21,2025 (www.justkannada.in): ದ್ವಿಚಕ್ರ ವಾಹನಗಳಲ್ಲಿ ಮಕ್ಕಳು ಹಿಂಬದಿ ಸವಾರರಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮತ್ತು ವೇಗದ ಮಿತಿ ನಿಗದಿಪಡಿಸುವ ಸಂಬಂಧ ಸುರಕ್ಷತಾ ಕ್ರಮಗಳುಳ್ಳ ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022ರ ನಿಯಮ 138ರ ಅನುಷ್ಟಾನಕ್ಕೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಅರ್ಚನಾ ಭಟ್ ಕೆ. ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಸಿಎಂವಿ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ವಾಸ್ತವವಾಗಿ ಈ ನಿಯಮವನ್ನು ಇನ್ನೂ ಜಾರಿಗೆ ತರಲಾಗಿಲ್ಲ. ಆದ್ದರಿಂದ, ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶಿಸಿ ನ್ಯಾಯಪೀಠವು ಪಿಐಎಲ್ ಇತ್ಯರ್ಥಪಡಿಸಿದೆ.
ಏನಿದು ನಿಯಮ..?
ಕೇಂದ್ರ ಮೋಟಾರು ವಾಹನ (ಎರಡನೇ ತಿದ್ದುಪಡಿ) ನಿಯಮಗಳು 2022ರ ನಿಯಮ 138(7) ಪ್ರಕಾರ, 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೋಟಾರು ಸೈಕಲ್‌ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣಿಸುವಾಗ ಮಗುವನ್ನು ಚಾಲಕನೊಂದಿಗೆ ಜೋಡಿಸಲು ಸುರಕ್ಷತಾ ಪರಿಕರ ಹಾಗೂ ಕ್ರ್ಯಾಶ್ ಹೆಲ್ಮೆಟ್ ಬಳಸಬೇಕು. ಜತೆಗೆ, 4 ವರ್ಷದವರೆಗಿನ ಮಕ್ಕಳನ್ನು ಹಿಂಬದಿ ಸವಾರರಾಗಿ ಸಾಗಿಸುವ ಮೋಟಾರ್ ಸೈಕಲ್‌ನ ವೇಗವು ಗಂಟೆಗೆ 40 ಕಿ.ಮೀ. ಗಿಂತ ಹೆಚ್ಚಿರಬಾರದು ಎಂದು ನಿಯಮ ರೂಪಿಸಿದೆ.
Key words: High Court, government, action,helmets, mandatory, children







