ಧರ್ಮ ಮತ್ತು ದೇವರ ಹೆಸರಿನಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಲು ಅವಕಾಶ ನೀಡಲಾಗದು- ಹೈಕೋರ್ಟ್

ಬೆಂಗಳೂರು,ನವೆಂಬರ್,21,2025 (www.justkannada.in): ಧರ್ಮ ಮತ್ತು ದೇವರ ಹೆಸರಿನಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಲು ಅನುಮತಿ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ.

ಕೋಲಾರ ಜಿಲ್ಲೆ ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ ಗೋಡೆ ಹಾಗೂ ಗ್ರಾಮದ ರಸ್ತೆಯ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿರುವ ಮಳಿಗೆಗಳ ತೆರವಿಗೆ ಕೋಲಾರ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟಬಲ್ ಟ್ರಸ್ಟ್ (ರಿ) ಹಾಗೂ ಜಾಮೀಯಾ ಮಸ್ಜಿದ್ ಕಮಿಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ  ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್  ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠವು,  ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಲು ಹಾಗೂ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ಗೆ ಅವಕಾಶ ನೀಡಲಾಗದು ಎಂದು ಎಚ್ಚರಿಕೆ ನೀಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಕ್ಯಾಲನೂರು ಗ್ರಾಮದ ಖಾಲಿ ಜಾಗವನ್ನು ದಶಕದಿಂದ ಎರಡೂ ಅರ್ಜಿದಾರ ಸಂಸ್ಥೆಗಳು ನಿರ್ವಹಣೆ ಮಾಡಿಕೊಂಡು ಬಂದಿವೆ. ಗ್ರಾಮಸ್ಥರ ಹಿತದೃಷ್ಟಿಯಿಂದ ಈ ಜಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ಸಮುದಾಯದ ದೇಣಿಗೆಗಳಿಂದ ಮಳಿಗೆಗಳನ್ನು ನಿರ್ಮಿಸಿ, ಮೂಲಸೌಕರ್ಯಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಬರುವ ಬಾಡಿಗೆ ಹಣವನ್ನು ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಈ ನಡುವೆ, ಮಳಿಗೆಗಳನ್ನು ತೆರವುಗೊಳಿಸಲು ತಹಶೀಲ್ದಾರ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಈ ವೇಳೆ ನ್ಯಾಯಪೀಠವು ಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ? ಯಾವ ಆಧಾರದಲ್ಲಿ ಮಳಿಗೆಗಳನ್ನು ಕಟ್ಟಿ ಅವುಗಳನ್ನು ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿತು.

ಅಲ್ಲದೆ ಇದು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ಅಲ್ಲದೆ ಮತ್ತೇನಿಲ್ಲ. ಈ ರೀತಿ ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಿಸುವುದಕ್ಕೆ ಮತ್ತು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ಗೆ ಅವಕಾಶ ನೀಡಲಾಗುವುದಿಲ್ಲ. ಅರ್ಜಿದಾರರು ಚಾರಿಟಬಲ್ ಟ್ರಸ್ಟ್ ಎಂದು ಹೇಳಿಕೊಂಡಿದ್ದಾರೆ. ಹೀಗಿದ್ದಾಗ, ಮಳಿಗೆ ಕಟ್ಟಿ ಬಾಡಿಗೆ ವಸೂಲಿ ಮಾಡುವುದು ಏಕೆ? ನ್ಯಾಯಪೀಠ ಪ್ರಶ್ನಿಸಿತು.

ಜಾಗ ಮಂಜೂರು ಪ್ರಸ್ತಾವನೆ ಜಿಲ್ಲಾಧಿಕಾರಿ ಮುಂದಿದ್ದರೆ ಅವರ ಬಳಿ ಹೋಗಿ, ಜಾಗ ಮಂಜೂರು ಮಾಡುವುದು ಅವರಿಗೆ ಬಿಟ್ಟಿದ್ದು. ಸದ್ಯಕ್ಕಂತೂ ಜಾಗ ಸರ್ಕಾರಕ್ಕೆ ಸೇರಿದ್ದು. ಸರ್ಕಾರಿ ಜಾಗದಲ್ಲಿ ನೀವು ಹಕ್ಕು ಸಾಧಿಸಲು ಬರುವುದಿಲ್ಲ. ಸರ್ಕಾರಿ ಜಾಗ ಇದ್ದಾಗ ನಿಮಗೆ ಯಾವುದೇ ರಕ್ಷಣೆ ಅಥವಾ ಪರಿಹಾರ ನೀಡಲಾಗದು ಎಂದು ನ್ಯಾಯಪೀಠ ಹೇಳಿತು.

Key words: Encroachment, government land, religion, High Court