ಹೂಡಿಕೆ ಆಕರ್ಷಣೆಗೆ ನ.24ರಿಂದ 3 ದಿನ ಕಾಲ ಲಂಡನ್ ಭೇಟಿ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು, ನವೆಂಬರ್, 20,2025 (www.justkannada.in): ಇಂಗ್ಲೆಂಡಿನ ಪ್ರಮುಖ ಕಂಪನಿಗಳಿಂದ ರಾಜ್ಯಕ್ಕೆ ಬಂಡವಾಳ ಹೂಡಿಕೆನ್ನು ಆಕರ್ಷಿಸಲು ಇದೇ ನವೆಂಬರ್ 24ರಿಂದ 26ರವರೆಗೆ ಲಂಡನ್ ಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಭೇಟಿ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಇಂದು ತಮ್ಮನ್ನು ಇಲ್ಲಿ ಭೇಟಿ ಮಾಡಿದ ಯುನೈಟೆಡ್ ಕಿಂಗ್ಡಮ್ ನ ಕಾಮನ್ವೆಲ್ತ್ ವ್ಯವಹಾರಗಳು ಮತ್ತು ಅಭಿವೃದ್ಧಿ ಸಚಿವೆ ಸೀಮಾ ಮಲ್ಹೋತ್ರ ಮತ್ತು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಲಿಂಡಾ ಕೆಮರಾನ್ ಅವರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ಅವರು, ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಈ ವರ್ಷದ ಆರಂಭದಲ್ಲಿ ಮುಕ್ತ ವಾಣಿಜ್ಯ ಒಪ್ಪಂದವನ್ನು ಮಾಡಿಕೊಂಡಿರುವುದರಿಂದ ಹೆಚ್ಚು ಅನುಕೂಲವಾಗಿದೆ. ಲಂಡನ್ ಭೇಟಿಯ ವೇಳೆಯಲ್ಲಿ ಅಲ್ಲಿನ ದೈತ್ಯ ಉದ್ದಿಮೆಗಳಾದ ಎಲಿಮೆಂಟ್-6, ಎ.ಆರ್.ಎಂ, ಲಿಂಡೆ, ಮಾರ್ಟಿನ್ ಬೇಕರ್, ಫಿಡೋ ಎಐ, ಆಕ್ಸಫರ್ಡ್ ಸ್ಪೇಸ್ ಸಿಸ್ಟಮ್ಸ್, ಗ್ರೀನ್ ಜೆಟ್ಸ್, ನ್ಯಾನೋಪೋರ್ ಟೆಕ್, ಗ್ರೂಪ್ ರೋಡ್ಸ್, ದಿ ಸೆನೇಟರ್ ಗ್ರೂಪ್, ದಿ ಲಾಟೋಸ್ ಗ್ರೂಪ್, ಸ್ಯಾಮ್ಕೋ ಹೋಲ್ಡಿಂಗ್ಸ್ ಮುಂತಾದವುಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದಿದ್ದಾರೆ.

ರಾಜ್ಯವು ಅಲ್ಲಿಯ ಕಂಪನಿಗಳನ್ನು ಇಲ್ಲಿ ಹೂಡಿಕೆ ಮಾಡುವಂತೆ ಮಾಡುವ ಮೂಲಕ, ಆರ್ಥಿಕ ಸಂಬಂಧವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣ, ತಂತ್ರಜ್ಞಾನ ವಿನಿಮಯ, ಹೈಟೆಕ್ ತಯಾರಿಕೆ, ವೈಮಾಂತರಿಕ್ಷ, ರಕ್ಷಣೆ, ವಿದ್ಯುತ್ ವಾಹನ, ಶುದ್ಧ ಇಂಧನ, ಉನ್ನತ ಸಂಶೋಧನೆ ಆಧಾರಿತ ಉದ್ದಿಮೆಗಳ ವಲಯಗಳತ್ತ ನಮ್ಮ ಗಮನವಿದೆ. ಇದರ ಭಾಗವಾಗಿ ನ.25ರಂದು ಯುಕೆ-ಇಂಡಿಯಾ ವಾಣಿಜ್ಯ ಒಕ್ಕೂಟ ಏರ್ಪಡಿಸಿರುವ ಸಭೆಯಲ್ಲಿ ಪಾಲ್ಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬ್ರಿಟನ್ ದೇಶದ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಯಾಗಿರುವ ಕ್ಯಾಂಟರ್ಬರಿಯ ದಿ ಕಿಂಗ್ಸ್ ಸ್ಕೂಲ್ 2026ನೇ ಶೈಕ್ಷಣಿಕ ಸಾಲಿನಿಂದ ಮತ್ತು ಮುಂಬೈ ಮೂಲದ ರಿಯಾನ್ ಶಿಕ್ಷಣ ಸಮೂಹದ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ಆ ದೇಶದ ಆರ್.ಜಿ.ಎಸ್. ಗಿಲ್ಡ್ ಫೋರ್ಡ್ 2028ರಿಂದ ಬೆಂಗಳೂರಿನಲ್ಲಿ ತಮ್ಮ ಕ್ಯಾಂಪಸ್ ತೆರೆಯಲಿವೆ. ಇವು 12 ವರ್ಷಗಳ ಬ್ರಿಟನ್ ಪಠ್ಯಕ್ರಮವನ್ನು ಅನುಸರಿಸಲಿವೆ ಎಂದು ಆ ದೇಶದ ಅಧಿಕಾರಿಗಳು ಈ ಸಂದರ್ಭದಲ್ಲಿ ಸಚಿವರ ಜತೆ ಮಾಹಿತಿ ನೀಡಿದ್ದಾರೆ.

ಲಿವರ್‌ ಪೂಲ್ ವಿಶ್ವವಿದ್ಯಾಲಯ ಕೂಡ ಬೆಂಗಳೂರಿನಲ್ಲಿ ಕ್ಯಾಂಪಸ್ ಆರಂಭಿಸಿದ್ದು, ಸಂತೋಷದ ವಿಷಯ. ಇನ್ನೂ ಅನೇಕ ವಿವಿ ಗಳು ಕರ್ನಾಟಕಕ್ಕೆ ಬರುವ ವಿಶ್ವಾಸ ಇದೆ ಎಂದು ಎಂ.ಬಿ ಪಾಟೀಲ್ ಹೇಳಿದರು.

Key words: Minister, M.B. Patil , London , attract, investment