‘JDS’ ಪಕ್ಷಕ್ಕೆ 25 ವರ್ಷ: ಬೆಳ್ಳಿಹಬ್ಬ ಆಚರಣೆಗೆ ನಿರ್ಧಾರ

ಮೈಸೂರು,ನವೆಂಬರ್,19,2025 (www.justkannaa.in):  ನಮ್ಮ ಜೆಡಿಎಸ್ ಪಕ್ಷ 25 ವರ್ಷ ಪೂರೈಸಿದೆ. ಹೀಗಾಗಿ ಬೆಳ್ಳಿ ಹಬ್ಬ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಹಾಗೂ ಶಾಸಕ ಜಿ.ಡಿ ಹರೀಶ್ ಗೌಡ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಶಾಸಕ ಜಿ.ಡಿ ಹರೀಶ್ ಗೌಡ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.  ಈ ವೇಳೆ ಮಾತನಾಡಿದ ಶಾಸಕ ಜಿ.ಡಿ ಹರೀಶ್ ಗೌಡ, ನಮ್ಮ ಜೆಡಿಎಸ್ ಪಕ್ಷ 25 ವರ್ಷ ಪೂರೈಸಿದೆ.  ಹೀಗಾಗಿ ಬೆಳ್ಳಿ ಹಬ್ಬ ಮಾಡಬೇಕು ಎಂದು ಪಕ್ಷದ ಮುಖಂಡರು ತೀರ್ಮಾನ ಮಾಡಿದ್ದೇವೆ. ಪಕ್ಷದ ಎಲ್ಲಾ ನಾಯಕರ ನೇತೃತ್ವದಲ್ಲಿ 25ವರ್ಷ ಪೂರೈಸಿರುವ ಅಂಗವಾಗಿ ಹೆಚ್ ಡಿ ದೇವೇಗೌಡರು ಮತ್ತು ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಮಾಡಿರುವ ಸಾಧನೆಯನ್ನ ಮನೆ ಮನೆಗೆ ತಲುಪಿಸುವ ತೀರ್ಮಾನವನ್ನ ಪಕ್ಷದ ಕಾರ್ಯಕರ್ತರು ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ದೇವೇಗೌಡರು ಕುಮಾರಸ್ವಾಮಿ ಮಾಡಿರುವ ಸಾಧನೆಗಳ ಕುರಿತು ಪ್ರತಿ ಮನೆ ಮನೆಗಳಿಗೆ ತಲುಪಿರುವ ತೀರ್ಮಾನ ಮಾಡಿದ್ದೇವೆ ಎಂದರು.

ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬ ಯಾವ ರೀತಿ ಆಚರಣೆ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ. ಪಕ್ಷದ ಸಾಧನೆ ಬೆಳೆದು ಬಂದ ರೀತಿ ಎಲ್ಲರಿಗೂ ಗೊತ್ತಾಗಬೇಕು. ಈ ಹಿನ್ನಲೆ ಮೈಸೂರಿನಲ್ಲಿ ನವೆಂಬರ್ 21 ಹಾಗೂ 22ನೇ ತಾರೀಖು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಎಲ್ಲ ಕಡೆ ಕೂಡ ಬೆಳ್ಳಿ ಹಬ್ಬ ಆಚರಣೆ- ಮಾಜಿ ಸಚಿವ ಸಾ.ರಾ ಮಹೇಶ್

ಮಾಜಿ ಸಚಿವ ಸಾ.ರಾ ಮಹೇಶ್ ಮಾತನಾಡಿ, ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಆದ ಮೇಲೆ ನಿಖಿಲ್ ಕುಮಾರಸ್ವಾಮಿ ರಾಜ್ಯದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ 25 ವರ್ಷ ತುಂಬಿದೆ. ದೇವೇಗೌಡರ ಕುಮಾರಸ್ವಾಮಿ ಅವರ ಸಾಧನೆಗಳ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು. ರಾಜ್ಯದಲ್ಲಿ ಎಲ್ಲ ಕಡೆ ಕೂಡ ಬೆಳ್ಳಿ ಹಬ್ಬ ಆಚರಣೆ ಮಾಡುತ್ತಿದ್ದೇವೆ. ಪ್ರಾದೇಶಿಕ ಪಕ್ಷ ಮಾತ್ರ ಈ ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯ ಎಂಬುದನ್ನು ಜನರಿಗೆ ತಿಳಿಸಬೇಕು. ದೇವೇಗೌಡರ ಹೋರಾಟದಿಂದ ರಾಷ್ಟ್ರೀಯ ಪಕ್ಷಗಳ ಜೊತೆಗೆ ನಮ್ಮ ಜೆಡಿಎಸ್ ಹೋರಾಟ ಮಾಡಿಕೊಂಡು ಬಂದಿದೆ. ಜೆಡಿಎಸ್ ಪಕ್ಷದ ಎಲ್ಲ ಮುಖಂಡರಿಗೂ ಜವಾಬ್ದಾರಿ ಕೊಡಬೇಕು . 21 ನೇ ತಾರೀಖು ಮೈಸೂರಿನಲ್ಲಿ ನಾವು ಕಾರ್ಯಕ್ರಮ ಮಾಡುತ್ತೇವೆ. ಜಿಟಿ ದೇವೇಗೌಡರು ಕಾರ್ಯಕ್ರಮಕ್ಕೆ ಬರುತ್ತಾರೆ ಅನಿಸುತ್ತೆ. ಸಹಕಾರಿ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದೆ. ಅವರು ಆ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದಾರೆ. ಜೆಡಿಎಸ್ ಬೆಳ್ಳಿಹಬ್ಬದ ಜೊತೆಗೆ ಸ್ಥಳೀಯ ಚುನಾವಣೆಗೂ ಸಹ ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಹುರುಪು ತುಂಬುತ್ತೆವೆ ಎಂದರು.

ನಾಗರಹೊಳೆ ಅರಣ್ಯದಲ್ಲಿ ಸಫಾರಿ ಬಂದ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್,  ಸಫಾರಿ ಬಂದ್ ಮಾಡಿರುವುದು ಸರಿಯಲ್ಲ. ಹುಲಿ ದಾಳಿಯಿಂದ ರೈತರಿಗೆ ತೊಂದರೆ ಆಗುತ್ತಿದೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ. ಅದನ್ನ ಬಿಟ್ಟು ಸಫಾರಿ ಬಂದ್ ಮಾಡಿದರೆ ಅಲ್ಲಿರುವ ಸಿಬ್ಬಂದಿಗಳ ಪರಿಸ್ಥಿತಿ ಏನು? ಸಫಾರಿ ಬಂದ್ ಮಾಡಿದರೆ ಪ್ರವಾಸೋದ್ಯಮಕ್ಕೆ ತೊಂದರೆ ಆಗುತ್ತದೆ. ಸಫಾರಿ ಮಾಡುವುದರಿಂದ ಹುಲಿಗಳು ನಾಡಿಗೆ ಬರುತ್ತಿಲ್ಲ ಕೂಡಲೇ ಸಫಾರಿ ಪ್ರಾರಂಭ ಮಾಡಿ. ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡಬೇಕು. ಸಚಿವರು ಮತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ನಿರ್ಧಾರ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿದರು.

Key words: JDS, party, completes, 25 years , silver jubilee, Sa.Ra Mahesh, Harish gowda