ಬೆಂಗಳೂರು,ನವೆಂಬರ್,18,2025 (www.justkannada.in): ಸಾರ್ವಜನಿಕ ಮಹತ್ವದ ಯೋಜನೆಗಳಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗಳು ಪೂರ್ವಾನ್ವಯವಾಗುವಂತೆ ಅನುಮೋದನೆಗಳನ್ನು ನೀಡಬಾರದೆಂದು ಈ ವರ್ಷದ ಮೇ ತಿಂಗಳಲ್ಲಿ ತಾನು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಹಿಂಪಡೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ಇದರಿಂದಾಗಿ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಇದ್ದ ಅಡೆತಡೆ ಬಹುಮಟ್ಟಿಗೆ ನಿವಾರಣೆಯಾಗಿದ್ದು, ನಿರೀಕ್ಷೆಯಂತೆ ಎಲ್ಲವೂ ಸುಗಮವಾಗಿ ನಡೆದರೆ ಯುಗಾದಿ ವೇಳೆಗೆ ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ವಿಶ್ವಾಸ ಇದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ ಪಾಟೀಲ್ ಅವರು, `ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದರೆ, ಸುಪ್ರೀಂಕೋರ್ಟಿನಲ್ಲಿದ್ದ ಪರಿಸರ ಸಂಬಂಧಿ ಪ್ರಕರಣದಿಂದಾಗಿ ಏನೂ ಮಾಡುವಂತಿರಲಿಲ್ಲ. ಸುಪ್ರೀಂಕೋರ್ಟಿನ ನಿರ್ಧಾರದಿಂದ ಈಗ ಒಂದು ಹೆಜ್ಜೆ ಮುಂದಕ್ಕೆ ಬಂದಿದ್ದೇವೆ. ಈ ವಿಚಾರ ಈಗಲೂ ನ್ಯಾಯಾಂಗದ ವಿಚಾರಣೆಯಲ್ಲಿದೆ ಎನ್ನುವ ಅರಿವಿದೆ. ಆದರೂ ಇವತ್ತಿನ ನಿಲುವು ನಮ್ಮ ಕಿತ್ತೂರು ಕರ್ನಾಟಕ ಭಾಗಕ್ಕೆ ನಿರಾಳತೆ ತಂದಿದೆ ‘ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯಪುರ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, `ಈ ಹಿಂದಿನ ತೀರ್ಪಿನಿಂದ ವಿಮಾನ ನಿಲ್ದಾಣದ ಅಸ್ತಿತ್ವಕ್ಕೆ ಅಪಾಯ ಎದುರಾಗಿತ್ತು. ಆದರೆ, ಸಚಿವ ಎಂ.ಬಿ ಪಾಟೀಲ್ ತ್ವರಿತವಾಗಿ ಕ್ರಿಯಾಶೀಲರಾಗಿ, ಕಪಿಲ್ ಸಿಬಲ್ ಅವರಂತಹ ಹಿರಿಯ ನ್ಯಾಯವಾದಿಯನ್ನು ನೇಮಿಸಿಕೊಳ್ಳುವ ಮೂಲಕ ವಿಮಾನ ನಿಲ್ದಾಣಕ್ಕೆ ಪುನರ್ಜನ್ಮ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.
Key words: Minister, M.B. Patil, Supreme Court, Vijayapura Airport







