ನಾಲೆಗೆ ಬಿದ್ದು ಒದ್ದಾಡುತ್ತಿದ್ದ ಕಾಡಾನೆ ಮೇಲೆತ್ತುವಲ್ಲಿ ಯಶಸ್ವಿ

ಮಂಡ್ಯ,ನವೆಂಬರ್,18,2025 (www.justkannada.in):  ನೀರು ಕುಡಿಯಲು ಬಂದು ನಾಲೆಗೆ ಬಿದ್ದು ಕಳೆದ ಎರಡು ದಿನಗಳಿಂದ ನಾಲೆಯೊಳಗೆ ಒದ್ದಾಡುತ್ತಿದ್ದ ಕಾಡಾನೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರ ಬಳಿ ನೀರು ಕುಡಿಯಲು ಬಂದಿದ್ದ ಮರಿಯಾನೆ ನಾಲೆಗೆ ಬಿದ್ದು ಕಳೆದ ಎರಡು ದಿನಗಳಿಂದ ಸಂಕಷ್ಟ ಅನುಭವಿಸುತ್ತಿತ್ತು. ಇದೀಗ ಇಂದು ಅರಣ್ಯ ಅಧಿಕಾರಿಗಳು ನಾಲೆಯ ನೀರನ್ನು ತಗ್ಗಿಸಿ ಹೈಡ್ರಾಲಿಕ್ ಕ್ರೇನ್ ಬಳಸಿ ಆನೆಯನ್ನ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ನಾಲೆಯೊಳಗೆ ಓಡಾಡುತ್ತಿದ್ದ ಆನೆಗೆ ಮೊದಲು ಎರಡು ಬಾರಿ ಅರವಳಿಕೆ ನೀಡಲಾಯಿತು. ನಂತರ ಆನೆ ಕುಸಿದು ಪ್ರಜ್ಞೆ ತಪ್ಪಿದ್ದು ಈ ವೇಳೆ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ನಾಲೆಗೆ ಇಳಿದು ಆನೆಯನ್ನ ಕ್ರೇನ್ ಮೂಲಕ ಮೇಲೆತ್ತಲಾಯಿತು.  ರಕ್ಷಿಸಲಾದ ಕಾಡಾನೆಯನ್ನ ಅರಣ್ಯ ಇಲಾಖೆ ಕಾಡಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

Key words: Mandya, Elephant, canal, Successfully, lifted