ಮೈಸೂರು ನಗರ ಹೊರವಲಯದ ನಿವಾಸಿಗಳನ್ನೂ ಪಾಲಿಕೆ ವ್ಯಾಪ್ತಿಗೆ ತನ್ನಿ, ಮೂಲಭೂತ ಸೌಕರ್ಯ ಒದಗಿಸಿ- ಎಂ.ಲಕ್ಷ್ಮಣ್

ಮೈಸೂರು,ನವೆಂಬರ್,15,2025 (www.justkannada.in): ಮೈಸೂರು ನಗರ ದೊಡ್ಡದಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತ. ನಗರದ ಹೊರವಲಯದಲ್ಲಿ ನಿವೇಶನ ಖರೀದಿಸಿ ಅಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ತರಬೇಕು. ಅವರಿಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.

ಪ್ರಸ್ತುತ ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಣಗೊಳಿಸುವ ಬಗ್ಗೆ ಸರ್ಕಾರದ ನಿರ್ಧಾರ ಕುರಿತು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ ಜೊತೆ ಸಭೆಯಲ್ಲಿ ಎಂ.ಲಕ್ಷ್ಮಣ್ ಮಾತನಾಡಿದರು.

ಮೈಸೂರು ನಗರ ದೊಡ್ಡದಾಗಿ ಬೆಳೆಯುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯ ವಿಸ್ತರಣೆ ಮಾಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ತೀರ್ಮಾನವನ್ನ ಸ್ವಾಗತಿಸುತ್ತೇವೆ. ಇದು ಮುಖ್ಯವಾಗಿ ಅಧಿಸೂಚನೆಯಾಗಬೇಕು.  ಮೈಸೂರು ನಗರ ವ್ಯಾಪ್ತಿ ಹಾಲಿ 86 ಚ.ಕಿ.ಮೀ ಇದ್ದು,  ಅದನ್ನ 332 ಚ.ಕಿ.ಮೀ ವಿಸ್ತರರಣೆಗೆ ಪ್ಲಾನ್ ರೂಪಿಸಿದ್ದಾರೆ.  ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಅವಶ್ಯಕತೆಗಳ ಅನುಗುಣವಾಗಿ ಮೈಸೂರು ನಗರದ ಹೊಸ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿ ಮಾಡಿ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಂಡು ಅಲ್ಲಿ ವಾಸ ಮಾಡುತ್ತಿದ್ದಾರೆ ಹಾಗೂ ಹಾಗೂ ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಪಟ್ಟಣಗಳಿಂದ ಬಂದು ಮೈಸೂರು ನಗರದ ಪರಿಸರವನ್ನು ಇಷ್ಟಪಟ್ಟು ಮೈಸೂರು ನಗರದ ಹೊರವಲಯದಲ್ಲಿ ವಾಸಿಸುತ್ತಿದ್ದಾರೆ.

ಮೈಸೂರು ನಗರ ಹಾಗೂ ಹೊರವಲಯದಲ್ಲಿ ವಾಸಿಸುತ್ತಿರುವ ಎಲ್ಲರಿಗೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ವಿದ್ಯುಚ್ಚಕ್ತಿ, ಸಂಚಾರ ವ್ಯವಸ್ಥೆ ಮುಂತಾದ ಸೌಲಭ್ಯಗಳನ್ನು ಒದಗಿಸುವುದು ಪ್ರಮುಖವಾಗಿರುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ ಇದೆಲ್ಲವನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದರೆ ಕೇಂದ್ರಿಕೃತ ಆಡಳಿತದ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಪ್ರಸ್ತುತ ಈ ಕಾರ್ಯವು ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಪ್ರಸ್ತುತ ಇರುವ ಪಾಲಿಕೆಯನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಣಗೊಳಿಸುವುದರಿಂದ ಸರ್ವ ರೀತಿಯಲ್ಲೂ ಮೈಸೂರು ನಗರವನ್ನು ಅಭಿವೃದ್ಧಿಯನ್ನು ಪಡಿಸಲು ಸಾಧ್ಯವಾಗುತ್ತದೆ ಎಂದು ಎಂ.ಲಕ್ಷ್ಮಣ್ ಸಭೆಯಲ್ಲಿ ತಿಳಿಸಿದರು.

ಹಾಗೆಯೇ ನಗರದ ಹೊರವಲಯಗಳಲ್ಲಿ ವಾಸಿಸುತ್ತಿರುವವರಿಗೂ ಮೂಲಭೂತ ಸೌಕರ್ಯಕೊಡಲು ಸರ್ಕಾರ ಬದ್ದವಾಗಿದೆ. ನಗರ ವ್ಯಾಪ್ತಿಯಲ್ಲಿರುವರು ಮಾತ್ರ ಎಲ್ಲಾ ಮೂಲಭೂತ ಸೌಕರ್ಯ ಅನುಭವಿಸುವಂತಹದಲ್ಲ . ನಗರದ ಹೊರವಲಯದಲ್ಲಿರುವವರೂ ಸಹ ನಗರ ಪ್ರದೇಶ ವ್ಯಾಪ್ತಿಯಲ್ಲಿ ಬೆಳೆಯುತ್ತಿದ್ದಾರೆ.  ಆದರೆ ಅವರು ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತಿಲ್ಲ , ಹೀಗಾಗಿ ಅವರನ್ನೂ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಗೆ ಪರಿಗಣಿಸಬೇಕು. ಈ ಮೂಲಕ ಬೃಹತ್ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ಉನ್ನತೀಕರಣಗೊಳಿಸಲು ತ್ವರಿತವಾಗಿ ಕಾರ್ಯರೂಪಕ್ಕೆ ತರಬೇಕು  ಎಂದು ಒತ್ತಾಯಸುತ್ತೇವೆ ಎಂದು ಎಂ.ಲಕ್ಷ್ಮಣ್ ಹೇಳಿದ್ದಾರೆ.

Key words: Mysore City Corporation, Upgradation, M. Lakshman