ಮೈಸೂರು,ನವೆಂಬರ್,10,2025 (www.justkannada.in): ಗುಂಡ್ಲುಪೇಟೆ ಬಫರ್‌ಜೋನ್ ವಲಯ ವ್ಯಾಪ್ತಿಯ ಸುತ್ತಮುತ್ತ ಉಪಟಳ ನೀಡುತ್ತಿದ್ದ ಹುಲಿಯ ಜೊತೆಗೆ ಮೂರು ಹುಲಿಮರಿಗಳನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ಬಂಡೀಪುರ ಹುಲಿಯೋಜನೆ, ಗುಂಡ್ಲುಪೇಟೆ ಉಪ ವಿಭಾಗ, ಗುಂಡ್ಲುಪೇಟೆ ಬಫರ್ ಜೋನ್ ವಲಯ ವ್ಯಾಪ್ತಿಯ ಕಲ್ಲಹಳ್ಳಿ, ಪಡಗೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಸರಹದ್ದಿನಲ್ಲಿ ಇತ್ತೀಚಿಗೆ ಗ್ರಾಮಸ್ಥರು ಹಾಗೂ ರೈತರಿಗೆ ಉಪಟಳ ನೀಡಿ ಜಾನುವಾರುಗಳನ್ನು ಹತ್ಯೆಗೈಯುತ್ತಿದ್ದ ಹುಲಿಯ ಪತ್ತೆಗಾಗಿ ಅಳವಡಿಸಿದ್ದ ಕ್ಯಾಮರಾಗಳಲ್ಲಿ ಹುಲಿಯ ಛಾಯಚಿತ್ರ ಸೆರೆಯಾಗಿತ್ತು.
ಇದೀಗ ಈ ಹುಲಿಯನ್ನ ಇಂದು ಬೆಳಗಿನ ಜಾವ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿಯಲಾದ ಹುಲಿಯು ಸುಮಾರು ನಾಲ್ಕು ವರ್ಷದ ಹೆಣ್ಣು ಹುಲಿಯಾಗಿದ್ದು, ಹೆಣ್ಣು ಹುಲಿಯ ಜೊತೆಗೆ ಇದ್ದ ಸುಮಾರು ಎರಡು ತಿಂಗಳು ಪ್ರಾಯದ ಮೂರು ಹುಲಿ ಮರಿಗಳು ಸಹ ಸೆರೆಯಾಗಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ, ಬೆಂಗಳೂರು ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಂಧಿಕಾರಿಗಳು, ವನ್ಯಜೀವಿ, ಬೆಂಗಳೂರು ಅವರ ಮಾರ್ಗದರ್ಶನದಲ್ಲಿ ಬಂಡೀಪುರ ಹುಲಿಯೋಜನೆಯ ನಿರ್ದೇಶಕ ಎಸ್ ಪ್ರಭಾಕರನ್ ನೇತೃತ್ವದಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಸುರೇಶ್, ವಲಯ ಅರಣ್ಯಾಧಿಕಾರಿ ನಿಸಾರ್ ಅಹಮದ್, ಮೂಲೆಹೊಳೆ ವಲಯ, ಆರ್ ಶಿವಕುಮಾರ್, ಗುಂಡ್ಲುಪೇಟೆ ಬಫರ್‌ಜೋನ್ ವಲಯ (ಪ್ರಭಾರ), ವೈರಮುಡಿ, ವಿಶೇಷ ಹುಲಿ ಸಂರಕ್ಷಣಾ ದಳ, ಪಶು ವೈಧ್ಯಾಧಿಕಾರಿಗಳಾದ ಡಾ. ಮಿರ್ಜಾ ವಾಸೀಂ, ಡಾ. ರಮೇಶ್, ಅರೆವಳಿಕೆ ಚುಚ್ಚು ಮದ್ದು ತಜ್ಞ ರಂಜನ್, ಉಪ ವಲಯ ಅರಣ್ಯಾಧಿಕಾರಿ ಭರತ್ ಜಿ.ಪಿ ಇವರುಗಳು ಹುಲಿ ಸೆರೆ ಕಾರ್ಯಚರಣೆಗಾಗಿ ಡೋಗ್ ತಂಡದ ರಾಜೀವ್ ಮತ್ತು ಸಿಬ್ಬಂದಿಗಳು ಹಾಗೂ ಬೆಂಗಳೂರು, ಕೋಲಾರ, ಬಿ.ಆರ್.ಟಿ, ಮಲೆಮಹದೇಶ್ವರ ಬೆಟ್ಟ ಹಾಗೂ ಕಾವೇರಿ ವನ್ಯಜೀವಿ ವಿಭಾಗಗಳಿಂದ ನಿಯೋಜಿಸಲ್ಪಟ್ಟ ಸಿಬ್ಬಂದಿಗಳು, ಮೂಲೆಹೊಳೆ ವಲಯದ ಸಿಬ್ಬಂದಿಗಳು, ಗುಂಡ್ಲುಪೇಟೆ ಬಫರ್‌ಜೋನ್ ವಲಯದ ಸಿಬ್ಬಂದಿಗಳು ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಹಾಗೆಯೇ ಸಾಕಾನೆಗಳಾದ ಭೀಮ, ಮಹೇಂದ್ರ, ಸುಗ್ರೀವ ಹಾಗೂ ಲಕ್ಷ್ಮಣ ಇವರುಗಳ ಸಹಯೋಗದಿಂದ ಕಾರ್ಯಚರಣೆಯನ್ನು ಕೈಗೊಳ್ಳಲಾಗಿತ್ತು. ಇದೀಗ ಮೂರು ಹುಲಿ ಮರಿಗಳ ಸಹಿತ ಒಂದು ಹೆಣ್ಣು ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾರ್ಯಚರಣೆ ವೇಳೆ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ. ರಮೇಶ್ ಕುಮಾರ್ ಉಪಸ್ಥಿತರಿದ್ದರು.
ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಹುಲಿ ಕಾರ್ಯಚರಣೆಯಲ್ಲಿ ಭಾಗವಹಿಸಿ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಸೆರೆ ಹಿಡಿಯಲಾದ ಹೆಣ್ಣು ಹುಲಿ ಮತ್ತು ಮೂರು ಹುಲಿ ಮರಿಗಳು ಆರೋಗ್ಯವಾಗಿದ್ದು ಇಲಾಖಾ ಪಶುವೈಧ್ಯಾಧಿಕಾರಿಗಳ ಉಪಚಾರ ಮತ್ತು ಮೇಲ್ವಿಚಾರಣೆಯೊಡನೆ ಸುರಕ್ಷಿತವಾಗಿ ಬಂಡೀಪುರಕ್ಕೆ ಸಾಗಿಸಿ ಪಶುವೈಧ್ಯಾಧಿಕಾರಿಗಳ ನಿಗಾದಲ್ಲಿ ಇರಿಸಲಾಗಿದ್ದು ನಂತರ ಹೆಚ್ಚಿನ ಹಾರೈಕೆಗಾಗಿ ಮೇಲಾಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Key words: Mysore, tiger, cubs, capture, Forest Department







