ಮೈಸೂರು,ನವೆಂಬರ್,10,2025 (www.justkannada.in): ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಏಳನೇ ಸ್ಥಾನದಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಮೈಸೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಮೈಸೂರು ಶಿಕ್ಷಣಕ್ಕೆ ಮೊದಲಿನಿಂದಲೂ ಅತ್ಯಂತ ಪ್ರಾಮುಖ್ಯತೆ ನೀಡಿದ್ದ ಸಂಸ್ಥಾನ. ಇಲ್ಲೇ ಶಿಕ್ಷಣ ಸೂಚ್ಯಂಕದಲ್ಲಿ ಮೈಸೂರು ಜಿಲ್ಲೆ ಏಳರಿಂದ ಹದಿನಾಲ್ಕನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಗರಂ ಆದ ಸಿಎಂ ಬೇಗ ಪರಿಸ್ಥಿತಿ ಸುಧಾರಿಸಬೇಕು ಎಂದು ಸೂಚನೆ ನೀಡಿದರು.
ಸಿಇಒ ಮತ್ತು ಇತರೆ ಅಧಿಕಾರಿಗಳು ಆಸ್ಪತ್ರೆ, ಶಾಲೆ, ಹಾಸ್ಟೆಲ್ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎನ್ನುವ ನಾನು ಕೊಟ್ಟ ಸೂಚನೆ ಪಾಲನೆ ಆಗುತ್ತಿಲ್ಲ. ಇನ್ಸ್ ಪೆಕ್ಟರ್ ಗಳು, ಪಿಡಿಒಗಳು, ವಿಎ ಗಳ ಮೇಲೆ ಈ ಬಗ್ಗೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿವೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಕಚೇರಿಗಳಿಗೆ ಗೌಪ್ಯ ಭೇಟಿ ನೀಡಿದರೆ ಕೆಲಸ ಕದಿಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಕ್ಕಿ ಬೀಳುತ್ತಾರೆ. ಇಲ್ಲಿಯವರೆಗೂ ಯಾರ ವಿರುದ್ಧವೂ ದೂರು ಬಂದಿಲ್ಲ. ವರದಿ ಬಂದಿಲ್ಲ ಏಕೆ ಎಂದು ಪ್ರಶ್ನಿಸಿದರು.
ಹಾಸ್ಟೆಲ್‌ಗಳಲ್ಲಿ ಊಟದ ವ್ಯವಸ್ಥೆಯನ್ನು ಮೇಲಿಂದ ಮೇಲೆ ಪರಿಶೀಲನೆ ನಡೆಸಬೇಕು ಎನ್ನುವ ಸ್ಪಷ್ಟ ಸೂಚನೆ ನೀಡಿದರು.
ಹೊಸದಾಗಿ ಬಂದಿರುವ ಡಿಡಿಪಿಐ ಅವರಿಗೆ ನಿಮ್ಮ ಅವಧಿಯಲ್ಲಿ ಉತ್ತಮ ಫಲಿತಾಂಶ ಬರಬೇಕು. ನಾನು ಗಮನಿಸುತ್ತಿರುತ್ತೇನೆ ಎನ್ನುವ ಸೂಚನೆ ನೀಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಫಲಿತಾಂಶ ಉತ್ತಮವಾಗಿರಬೇಕು, ಇದಕ್ಕೆ ಏನು ಮಾಡಬೇಕು ಎನ್ನುವ ಬ್ಲೂಪ್ರಿಂಟ್ ಸಿದ್ದಪಡಿಸಿ ಎಂದರು.
ವರ್ಗಾವಣೆಗೆ ಅಧಿಕಾರಿ ಮತ್ತು ಸಿಬ್ಬಂದಿ ನಮಗೆ ಹತ್ತಿರದ ಕಾರ್ಯಕರ್ತರನ್ನೇ ಹಿಡ್ಕೊಂಡು ಬರುತ್ತಾ ಇದ್ದೀರಿ. ಇದು ಕೆಟ್ಟ ನಡವಳಿಕೆ. ನಾನು ಸಹಿಸಲ್ಲ. ಕಾರ್ಯಕರ್ತರಿಗೂ ಕೆಟ್ಟ ಹೆಸರು ತರುತ್ತೀರಿ. ಸರ್ಕಾರಕ್ಕೂ ಕೆಟ್ಟ ಹೆಸರು ತರಲು ಮುಂದಾದರೆ ಸಹಿಸಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
Key words: Mysore district, 14th position, education index, CM Siddaramaiah







