ಬೆಂಗಳೂರು,ನವೆಂಬರ್,7,2025 (www.justkannada.in): ಎಥೆನಾಲ್ ಖರೀದಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್ ಹಂಚಿಕೆಯನ್ನು ನಿಗದಿ ಮಾಡದೆ ರಾಜ್ಯದ ರೈತರಿಗೆ ದ್ರೋಹವೆಸಗಿದ್ದಾರೆ. ಆಗಿದ್ದರೂ ನಮ್ಮ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕದಿಂದ ತೈಲ ಮಾರಾಟ ಕಂಪನಿಗಳಿಗೆ ಎಥೆನಾಲ್ ಹಂಚಿಕೆ ನಿಗದಿ ಆಗಿರುವುದು 116.30 ಕೋಟಿ ಲೀಟರ್ ಹೊರತು 47 ಕೋಟಿ ಲೀಟರ್ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರ್ಖಂಡ್ ರಾಜ್ಯದ ಲೆಕ್ಕ ನೀಡಿದ್ದಾರೆ” ಎಂದು ಹೇಳುವ ಮೂಲಕ ತಾವು ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡಿರುವ ಬಿಜೆಪಿಯ ವಿಧೇಯ ಅನುಯಾಯಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಸಾಬೀತು ಪಡಿಸಿದ್ದಾರೆ.
ಇಂತಹದ್ದೊಂದು ಬೆತ್ತಲೆ ಸುಳ್ಳನ್ನು ನಿರ್ಲಜ್ಜತೆಯಿಂದ ರಾಜಾರೋಷವಾಗಿ ಹೇಳುವಾಗ ತಾನು ಹೊಂದಿರುವ ಸಚಿವ ಸ್ಥಾನದ ಮರ್ಯಾದೆಯನ್ನಾದರೂ ಜೋಷಿ ಅವರು ಗಮನದಲ್ಲಿಡಬೇಕಿತ್ತು. ನಾನು ಇಂದಿನ ಪತ್ರಿಕಾಗೋಷ್ಠಿಯಲ್ಲಿ 2024-25ನೇ ಸಾಲಿನಲ್ಲಿ ಕರ್ನಾಟಕದಿಂದ ತೈಲ ಮಾರಾಟ ಕಂಪನಿಗಳಿಗೆ ಹಂಚಿಕೆ ಮಾಡಲಾಗಿದ್ದ ಎಥೆನಾಲ್ ಪ್ರಮಾಣವನ್ನು ಸೀಮಿತವಾಗಿಟ್ಟುಕೊಂಡು ಮಾತನಾಡಿದ್ದೆ, 2024-25ನೇ ಸಾಲಿನಲ್ಲಿ ಕರ್ನಾಟಕದ 46 ಡಿಸ್ಟಿಲರಿಗಳ ಏಥೆನಾಲ್ ಉತ್ಪಾದನಾ ಸಾಮರ್ಥ್ಯ 270 ಕೋಟಿ ಲೀಟರ್, ನಮ್ಮಿಂದ ತೈಲ ಕಂಪೆನಿಗಳಿಗೆ ಹಂಚಿಕೆಯಾಗಿರುವುದು ಕೇವಲ 47 ಕೋಟಿ ಲೀಟರ್.
ಈ ಅಂಕಿ ಅಂಶ ಕರ್ನಾಟಕ ಸರ್ಕಾರದ್ದಲ್ಲ, ಇದು ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವರಾದ ಪ್ರಹ್ಲಾದ್ ಜೋಷಿ ಅವರೇ 2025ರ ಆಗಸ್ಟ್ ಆರರಂದು ಲೋಕಸಭೆಯಲ್ಲಿ ನೀಡಿರುವ ಉತ್ತರವಾಗಿದೆ. ಒಂದೋ ಜೋಷಿ ಅವರು ಇಂದು ನೀಡಿರುವ ಹೇಳಿಕೆ ಸುಳ್ಳಾಗಿರಬೇಕು, ಇಲ್ಲವಾದರೆ ಲೋಕಸಭೆಯಲ್ಲಿ ನೀಡಿದ್ದ ಉತ್ತರ ಸುಳ್ಳಾಗಿರಬಹುದು. ಯಾವ ಹೇಳಿಕೆಯನ್ನು ಒಪ್ಪಿಕೊಂಡರೂ ಜೋಷಿ ಅವರಿಗೆ ಸುಳ್ಳುಗಾರನ ಪಟ್ಟ ತಪ್ಪಿದ್ದಲ್ಲ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದರು.
ಎಥೆನಾಲ್ ಖರೀದಿಗೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಅನ್ಯಾಯ ಆಗಿರುವುದು ಇದೇ ಮೊದಲನೆ ಸಲವಲ್ಲ. 2021-22, 2022-23, 2023-24, 2024-2025ನೇ ಸಾಲಿನ ಕರ್ನಾಟಕದ ಎಥೆನಾಲ್ ಉತ್ಪಾದನೆಯ ಒಟ್ಟು ಸಾಮರ್ಥ್ಯ 879 ಕೋಟಿ ಲೀಟರ್ ಗಳಾದರೆ ರಾಜ್ಯದಿಂದ ಖರೀದಿ ಮಾಡಲಾಗಿರುವುದು 171 ಕೋಟಿ ಲೀಟರ್ ಮಾತ್ರ. ಇದು ಕರ್ನಾಟಕದ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಮಾಡಿರುವ ಘೋರ ಅನ್ಯಾಯವಲ್ಲದೆ ಮತ್ತೇನು? ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಆದರೆ ಗುಜರಾತ್ ರಾಜ್ಯದ ವಾರ್ಷಿಕ ಎಥೆನಾಲ್ ಉತ್ಪಾದನಾ ಸಾಮರ್ಥ್ಯ 40 ಕೋಟಿ ಲೀಟರ್ ಇದ್ದರೆ, ತೈಲ ಮಾರಾಟ ಕಂಪನಿಗಳಿಗೆ 31 ಕೋಟಿ ಲೀಟರ್ ಹಂಚಿಕೆ ಮಾಡಲಾಗಿದೆ. ಇದ್ಯಾವ ನ್ಯಾಯ? ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್ ಹಂಚಿಕೆಯನ್ನು ನಿಗದಿ ಮಾಡಬೇಕು ಎಂಬ ರೈತಪರವಾದ ನಮ್ಮ ಬೇಡಿಕೆಗೆ ಬೆಂಬಲ ನೀಡಬೇಕಿದ್ದ ಪ್ರಹ್ಲಾದ್ ಜೋಷಿಯವರು ನಮ್ಮ ವಿರುದ್ಧವೇ ಮಾತನಾಡಿ ರಾಜ್ಯದ ರೈತರಿಗೆ ದ್ರೋಹ ಎಸಗಿದ್ದಾರೆ.
ಜೋಷಿ ಅವರೇ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸ್ವತಃ ನಿಮಗೆ ಪತ್ರ ಬರೆದು ಕಬ್ಬಿಗೆ ಎಫ್.ಆರ್.ಪಿ ಮತ್ತು ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚು ಮಾಡಬೇಕು ಎಂಬ ಮನವಿ ಮಾಡಿದ್ದಾರೆ. ಕರ್ನಾಟಕದ ಬಿಜೆಪಿಯ ನಾಯಕರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕರ್ನಾಟಕದ ಎಥೆನಾಲ್ ಹಂಚಿಕೆ ಪ್ರಮಾಣ ಹೆಚ್ಚಿಸುವಂತೆ ಕೋರಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ಕುರುಡಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಪ್ರಧಾನ ಮಂತ್ರಿಯವರ ಎದುರು ನೆಟ್ಟಗೆ ನಿಂತು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಿ ಅವರ ಹಿತರಕ್ಷಣೆ ಮಾಡಬೇಕೆಂದು ಹೇಳುವ ಧೈರ್ಯವಾಗಲಿ, ಬದ್ಧತೆಯಾಗಲಿ ಸಚಿವ ಜೋಷಿ ಅವರಿಗಿಲ್ಲ. ಅವರದ್ದೇನಿದ್ದರೂ ರಾಜಕೀಯ ವಿವಾದ ಎಬ್ಬಿಸುವ ಸುಳ್ಳು ಹೇಳಿಕೆಗಳ ಉತ್ತರಕುಮಾರನ ಪೌರುಷ.
ರಾಜ್ಯದ ರೈತರನ್ನು ನಮ್ಮ ಸರ್ಕಾರದ ವಿರುದ್ಧ ಎತ್ತಿಕಟ್ಟಬೇಕೆಂಬ ಏಕೈಕ ದುರುದ್ದೇಶದಿಂದ ಸುಳ್ಳು ಹೇಳಿಕೆ ನೀಡಿರುವ ಸಚಿವ ಜೋಷಿ ಅವರು ತಮ್ಮ ಸುಳ್ಳಿಗಾಗಿ ರಾಜ್ಯದ ರೈತರ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತೇನೆ. ಈಗಲೂ ಕಾಲ ಮಿಂಚಿಲ್ಲ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಿ ಕರ್ನಾಟಕದಿಂದ ಹೆಚ್ಚಿನ ಪ್ರಮಾಣದ ಎಥೆನಾಲ್ ಖರೀದಿ ಮಾಡುವಂತೆ ಆದೇಶ ನೀಡುವಂತೆ ಮಾಡಿ, ರೈತರಿಗೆ ಬಗೆದಿರುವ ದ್ರೋಹದ ಪಾಪವನ್ನು ತೊಳೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
Key words: Injustice, purchase, ethanol, CM Siddaramaiah, Prahlad Joshi







