ಸರ್ಕಾರದ ಸವಲತ್ತು ಅರ್ಹ ಅಪೌಷ್ಟಿಕ ಮಕ್ಕಳಿಗೆ ತಲುಪುವಂತೆ ಕ್ರಮವಹಿಸಿ – ಶಶಿಧರ್ ಕೂಸುಂಬೆ ಸೂಚನೆ

ಮೈಸೂರು,ನವೆಂಬರ್,6,2025 (www.justkannada.in): ರಾಜ್ಯ ಸರಕಾರವು ಅಪೌಷ್ಟಿಕ ಮಕ್ಕಳ ಆರೈಕೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸರಕಾರದ ಸವಲತ್ತು ಅರ್ಹ ಅಪೌಷ್ಠಿಕ ಮಕ್ಕಳಿಗೆ ತಲುಪುವಂತೆ ಅಧಿಕಾರಿಗಳು ಕ್ರಮವಹಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೂಸುಂಬೆ ಅವರು ಹೇಳಿದರು.

ಇಂದು ಕೆ. ಆರ್ ಆಸ್ಪತ್ರೆ ಆವರಣದಲ್ಲಿರುವ  ಚೆಲುವಂಬ ಆಸ್ಪತ್ರೆಯ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗಬೇಕು ಹಾಗೂ ಗುರುತಿಸಲಾಗುವ ಅಪೌಷ್ಠಿಕ ಮಕ್ಕಳಿಗೆ ಸರಿಯಾದ ಆರೈಕೆ ಒದಗಿಸಿ ಅವರನ್ನು ಗುಣಮುಖರಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 91 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಆದರೆ ಆಸ್ಪತ್ರೆಯಲ್ಲಿರುವ ವಾರ್ಡ್ ಗಳಲ್ಲಿ ಒಂದು ಮಕ್ಕಳು ಕೂಡ ದಾಖಲಾಗಿಲ್ಲ ಸರಕಾರ ನೀಡುತ್ತಿರುವ ಸವಲತ್ತು ಆ ಮಕ್ಕಳಿಗೆ ತಲುಪುತ್ತಿಲ್ಲ , ಇನ್ನೂ 3 ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸಭೆ ನಡೆಸಿ 91 ಮಕ್ಕಳನ್ನು ಗುರುತಿಸಿ ಪಾಳಿ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಿ ನಮಗೆ ವರದಿ ನೀಡಬೇಕು ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದು ಎಂದರು.

ಚಲುವಾಂಬ ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಮಕ್ಕಳ ಅಪೌಷ್ಟಿಕ ಪುನರ್ವಸತಿ ಕೇಂದ್ರ ಎಂಬ ಫಲಕವನ್ನು ತೆಗೆದು ಮಕ್ಕಳ ಅಪೌಷ್ಟಿಕ ಪುನರ್ ಚೇತನ ಘಟಕ ಎಂದು ನಾಮಫಲಕವನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಕುಮಾರಸ್ವಾಮಿ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Officials, government, benefits, reach , malnourished children, Shashidhar Kusumbe