ಮೈಸೂರು,ನವೆಂಬರ್,5,2025 (www.justkannada.in): ‘ಸಮಾಜಮುಖಿ’ ಪತ್ರಿಕೆಯ ವತಿಯಿಂದ 2025ರ ನವೆಂಬರ್ 8 ಮತ್ತು 9 ಶನಿವಾರ-ಭಾನುವಾರಗಳಂದು ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ ಹೆಸರಿನಲ್ಲಿ ಸಾಹಿತ್ಯ ಸಂಭ್ರಮವೊಂದನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಕೇಂದ್ರ ಭಾಗದಲ್ಲಿ ನಡೆಸಲಾಗುತ್ತಿರುವ ಈ ಸಮಾವೇಶದಲ್ಲಿ ನಾಡಿನ ಎಲ್ಲ ಹಿರಿಯ-ಕಿರಿಯ ಸಾಹಿತಿ ಬರಹಗಾರರನ್ನು ಒಳಗೊಳ್ಳಲಾಗುತ್ತಿದೆ. ಅಂತೆಯೇ ಎಲ್ಲ ಸಾಹಿತ್ಯಾಸಕ್ತರು ಹಾಗೂ ಸಾಹಿತ್ಯದ ವಿದ್ಯಾರ್ಥಿಗಳನ್ನು ಆಹ್ವಾನ ನೀಡಲಾಗಿದೆ.
ಕನ್ನಡ ಸಾರಸ್ವತ ವಲಯದ ಬಹುತೇಕರು ಪಾಲ್ಗೊಳ್ಳುವ ಗೋಷ್ಠಿಗಳಲ್ಲಿ ವಿಷಯದ ವಿಷಮತೆಯ ಅನಾವರಣದ ಜೊತೆಗೆ ಪರಿಹಾರ ಗುರುತಿಸುವ ಸ್ಪಷ್ಟ ಯತ್ನದೆಡೆಗೆ ಚರ್ಚೆ ಆಯೋಜಿಸುವ ಗುರಿಯಿದೆ. ಮುಖ್ಯ ವೇದಿಕೆಯ ಜೊತೆಗೆ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಚರ್ಚೆ-ಕಾರ್ಯಾಗಾರ-ವಿಷಯ ಮಂಡನೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮುಖ್ಯ ವೇದಿಕೆಯ ಜೊತೆಗೆ ಸೃಜನಶೀಲ, ಶಾಸ್ತ್ರೀಯ, ಕನ್ನಡೇತರ ಹಾಗೂ ಸಂಸ್ಕೃತಿ ಸಂಪದ ವೇದಿಕೆಗಳಲ್ಲಿ ಒಟ್ಟು 47 ವೃಂದ ಚರ್ಚೆಗಳು ನಡೆಯುತ್ತಿವೆ.
ಉದ್ಘಾಟನಾ ಸಮಾರಂಭದಲ್ಲಿ ನಾಡೋಜ ಡಾ. ಹಂಪನಾ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಪ್ರೊ. ಹೆಚ್.ಎಸ್.ಶಿವಪ್ರಕಾಶ್ ಅವರು ಭಾಗವಹಿಸಲಿದ್ದು, 225ಕ್ಕೂ ಹೆಚ್ಚು ಲೇಖಕರು. ಚಿಂತಕರು ಈ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾಡಿನ 16 ಚಿತ್ರಕಲಾವಿದರು ಈ ಸಮ್ಮೇಳನದ ಸಂದರ್ಭದಲ್ಲಿ ಕಲಾಕೃತಿಗಳನ್ನು ರಚಿಸಲಿದ್ದಾರೆ. ಸುಮಾರು 2000 ಮಂದಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಕನ್ನಡ ಸಾಹಿತ್ಯದ ಹಿಂದಣ ಹೆಜ್ಜೆಯನ್ನು ಅರಿಯುತ್ತಾ ಸಮಕಾಲೀನ ಹಾಗೂ ಭವಿಷ್ಯದ ನೆಲೆ-ಬೆಲೆಗಳನ್ನು ಗುರುತಿಸಲು ಈ ಸಮ್ಮೇಳನದಲ್ಲಿ ಪ್ರಯತ್ನಿಸಲಾಗುತ್ತಿದೆ. ಕನ್ನಡಭಾಷೆ ಎದುರಿಸುತ್ತಿರುವ ಬಿಕ್ಕಟ್ಟುಗಳು, ಬಾಬಾಸಾಹೇಬ ಅಂಬೇಡ್ಕರ್ ಮತ್ತು ಗಾಂಧಿ ಚಿಂತನೆಗಳು ಕನ್ನಡ ಸಾಹಿತ್ಯದಲ್ಲಿ ಅನುಸಂಧಾನಗೊಂಡಿರುವ ಪರಿ. ನಮ್ಮ ಗಣತಂತ್ರ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಬಿಕ್ಕಟ್ಟುಗಳು ಮುಂತಾದ ಗಹನವಾದ ವಿಚಾರಗಳು ಮುಖ್ಯವೇದಿಕೆಯಲ್ಲಿ ಚರ್ಚಿತವಾಗಲಿದೆ.
ಸಣ್ಣಕಥೆ, ವಿಮರ್ಶೆ, ದಲಿತಸಾಹಿತ್ಯ, ವಚನಪರಂಪರೆ, ಪ್ರತಿರೋಧದ ಧ್ವನಿ, ಹೋರಾಟದ ಸಾಹಿತ್ಯ ಮುಂತಾದ ವಿಷಯಗಳ ಜೊತೆಗೆ ಹಳೆಗನ್ನಡಕಾವ್ಯ, ನಿರಂಜನ-100. ರಾಘವೇಂದ್ರ ಖಾಸನೀಸರ ಕಥಾಜಗತ್ತು, ‘ಹುಳಿಮಾವಿನಮರ’ ಮತ್ತು ‘ಸುರಗಿ’ ಆತ್ಮಕಥನಗಳ ಬಗ್ಗೆ ಚರ್ಚೆ, ಪೂರ್ಣಚಂದ್ರ ತೇಜಸ್ವಿ-ಸತ್ಯಜಿತ್ ರೇ ಅವರ ಅಭಿವ್ಯಕ್ತಿ-ಸೃಜನಶೀಲತೆ ಕುರಿತ ಚರ್ಚೆಗಳು ನಡೆಯಲಿವೆ.
ಸಂಸ್ಕೃತಿ-ಸಂಪದ ವೇದಿಕೆಯಲ್ಲಿ ಜಾನಪದ, ಚಿತ್ರಕಲೆ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಸಾಹಿತ್ಯ ಪತ್ರಿಕೆ, ಪರಿಸರ ಪತ್ರಿಕೋದ್ಯಮ ಹಾಗೂ ಮಕ್ಕಳ ಸಾಹಿತ್ಯ ಕುರಿತಂತೆ ಚರ್ಚೆಗಳು ನಡೆಯಲಿವೆ. ದೇಶದ ನಾನಾ ಭಾಗಗಳಿಂದ ಬರುವ ಚಿಂತಕರು ಸಮಕಾಲೀನ ಸಾಹಿತ್ಯ, ಪರಿಸರ. ಯುವಜನತೆ, ಸಾಕ್ಷ್ಯಚಿತ್ರ, ಕಾವ್ಯ, ಜಾತಿ, ಧರ್ಮ ಮತ್ತು ರಾಷ್ಟ್ರೀಯತೆ ಪ್ರತಿಭಟನಾ ರಂಗಭೂಮಿ ಮತ್ತು ಸಮಾಜ ಹಾಗಯ ಸಾಹಿತ್ಯ ಚಳುವಳಿ ಕುರಿತಂತೆ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಇಂಗ್ಲಿಷ್ ಭಾಷೆಯ ಒಂದು ವೇದಿಕೆ ಈ ಸಮ್ಮೇಳನದಲ್ಲಿ ಇರಲಿದೆ.
ಕರ್ನಾಟಕ ಹಾಗೂ ದೇಶದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ನಡೆಯುತ್ತಿರುವ ಪ್ರಯೋಗಗಳು ಮತ್ತು ಪಲ್ಲಟಗಳನ್ನು ಗುರುತಿಸುವ, ವಿಶ್ಲೇಷಿಸುವ, ಹೊಸ ಸಾಧ್ಯತೆಗಳನ್ನು ಅನ್ವೇಷಿಸುವ ಪ್ರಯತ್ನ ಈ ಸಮ್ಮೇಳನದಲ್ಲಿ ನಡೆಯುತ್ತಿದೆ.
ಹಂಪನಾ. ಬಿ.ಆರ್.ರವಿಕಾಂತೇಗೌಡ, ಸಮಾರೋಪ-ಸಮಾರಂಭದಲ್ಲಿ ಜಿ.ರಾಮಕೃಷ್ಣ, ಕೆ.ರಾಮಯ್ಯ, ಮಾಲತಿ ಪಟ್ಟಣಶೆಟ್ಟಿ, ಹೆಚ್.ಎಲ್.ಪುಷ್ಪ ಅವರು ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎರಡೂ ದಿನಗಳು ವಿವಿಧ ಪ್ರಕಾಶನಸಂಸ್ಥೆಗಳಿಂದ ಪುಸ್ತಕಪ್ರದರ್ಶನ, ಮಾರಾಟ ಹಾಗೂ ಹೊಸ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಮೂಡಲಪಾಯ ಯಕ್ಷಗಾನ ಪ್ರದರ್ಶನ ಇರಲಿದೆ.
Key words: Samajmukh Sahitya Sammelana, November 8th, 9th







