ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆ- ಸಿಎಂ ಸಿದ್ದರಾಮಯ್ಯ

ಮೈಸೂರು, ನವೆಂಬರ್, 3,2025 (www.justkannada.in): ಬಿಹಾರದಲ್ಲಿನ ಅಧಿಕಾರವಿರೋಧಿ ಅಲೆ ಹಾಗೂ ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಅಂಶಗಳು ಪ್ರಮುಖವಾಗಲಿದ್ದು, ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಜಯಸಾಧಿಸುವ ಭರವಸೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಹಾರ ಚುನಾವಣೆ ಪ್ರಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಬಿಹಾರ ಚುನಾವಣಾ ಪ್ರಚಾರಕ್ಕೆ ಕರೆ ಬಂದರೆ ಅಗತ್ಯವಾಗಿ ತೆರಳುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ. ಬಿಹಾರ ಮತದಾರರಿಗೆ ಮತನೀಡಲು ಕೋರಲಾಗುವುದು ಎಂದರು.

ಬಿಹಾರದಲ್ಲಿನ ಅಧಿಕಾರ ವಿರೋಧಿ ಅಲೆ ಹಾಗೂ ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಅಂಶಗಳು ಪ್ರಮುಖವಾಗಲಿವೆ. ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟವೂ ರಾಜ್ಯದ ಗ್ಯಾರಂಟಿ ಯೋಜನೆಗಳ ಭರವಸೆಗಳ ಮಾದರಿಯನ್ನು ಅನುಸರಿಸಿದೆ. ಕರ್ನಾಟಕದಲ್ಲಿ 1.24 ಕೋಟಿ ಮಹಿಳೆಯರಿಗೆ ಪ್ರತಿಮಾಹೆ 2000 ರೂ. ಗೃಹಲಕ್ಷ್ಮಿ ಗ್ಯಾರಂಟಿ ನೀಡಲಾಗುತ್ತಿದೆ. ಇದುವರೆಗೆ ರಾಜ್ಯದಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗಿದೆ.  ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದು,ಅವರಿಗೆ ಯಾವುದೇ ಸಿದ್ಧಾಂತವಿಲ್ಲ. ಬಿಹಾರದಲ್ಲಿ ಬಡತನ ನಿರ್ಮೂಲನೆಯಾಗಿಲ್ಲ.  ಆದ್ದರಿಂದ ಬಡವರು, ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್ ಪರ ಮತಚಲಾಯಿಸುವ ಭರವಸೆಯಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿರುವ ಹಲವು ಸಾಧಕರನ್ನು ಗುರುತಿಸಿ ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಬಾರಿ ಪ್ರಶಸ್ತಿಗಾಗಿ ಅರ್ಜಿಯನ್ನು ಕರೆಯದೇ, ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮಾನತೆಯನ್ನು ಗಮನದಲ್ಲಿರಿಸಿ ಪ್ರತಿ ಜಿಲ್ಲೆಯಿಂದಲೂ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ ಎಂದರು.

ಹುಲಿ ದಾಳಿ ಪ್ರಕರಣದ ಪರಿಶೀಲನೆಗೆ ಶೀಘ್ರದಲ್ಲಿ ಸಿಎಂ ಸಭೆ

ಮೈಸೂರಿನಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೆಸಾರ್ಟ್ ಗಳು ತಲೆ ಎತ್ತುತ್ತಿದ್ದು, ಸಫಾರಿಗಳು ಸೇರಿದಂತೆ ಜನರ ಸಂಚಾರ ಹೆಚ್ಚುತ್ತಿದೆ. ನೀರು ಮತ್ತು ಮೇವಿನ ಕೊರತೆ ಹಾಗೂ ಹುಲಿ ಚಿರತೆಗಳ ಹಾವಳಿಯಿಂದ  ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಸಭೆ ಈಗಾಗಲೇ ನಡೆಸಿದ್ದು, ನನ್ನ ಅಧ್ಯಕ್ಷತೆಯಲ್ಲಿಯೂ ಸಭೆ ನಡೆಯಲಿದೆ. ಅಲ್ಲದೇ, ಅಕ್ರಮವಾಗಿ ರೆಸಾರ್ಟ್ ಗಳನ್ನು ನಡೆಸುತ್ತಿರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರವಾಸಿಗರಿಗಾಗಿ ಕೈಗೊಳ್ಳುವ ಸಫಾರಿಗಳ ಸಂಖ್ಯೆಯನ್ನೂ ಕಡಿಮೆ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಹೈಕಮಾಂಡ್ ತೀರ್ಮಾನ ಅಂತಿಮ

ರಾಜ್ಯದಲ್ಲಿ ನೆಲೆಸಿರುವ ಬಿಹಾರಿ ಮತದಾರರು, ಕರ್ನಾಟಕದ ಮುಖ್ಯಮಂತ್ರಿಗಳ ಬದಲಾವಣೆ ಕುರಿತ ಮಾತನಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜನರು ಅಭಿಪ್ರಾಯವೇನೇ ಇದ್ದರೂ, ಹೈಕಮಾಂಡ್ ನ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಈ ಬಗ್ಗೆ ಏನೂ ಹೇಳಿರುವುದಿಲ್ಲ . ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನ್ರಚನೆಯ ಬಗ್ಗೆ  ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದರು.

Key words: Bihar Assembly Elections, win, CM Siddaramaiah