ಆನ್ ಲೈನ್ ಮೂಲಕ ಕಲಿಕೆ : ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಿದ ಕೆಎಸ್ಒಯು

 

ಮೈಸೂರು.ಅ.19, 2019 : ದೂರಶಿಕ್ಷಣದ ಆಶಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ಒಂದು ಹೆಜ್ಜೆ ಮುಂದೆ ಇಟ್ಟಿದೆ. ವಿ.ವಿ.ಯ ಮೊಬೈಲ್‌ ಫೋನ್‌ ಅಪ್ಲಿಕೇಷನ್‌ ವಿದ್ಯಾರ್ಥಿಗಳಿಗಾಗಿ ಸಿದ್ಧವಾಗಿದೆ.

ವಿವಿಧ ಕೋರ್ಸ್‌ಗಳಿಗೆ ದಾಖ ಲಾಗುವ ವಿದ್ಯಾರ್ಥಿಗಳು ಈಗಲೂ ಕೆಎಸ್‌ಒಯು ನೀಡುತ್ತಿದ್ದ ಮುದ್ರಿತ ಸಿದ್ಧಪಠ್ಯಗಳನ್ನು ಪರಾಮರ್ಶಿಸಬೇಕಿದೆ. ಅಲ್ಲದೇ, ವಿದ್ಯಾರ್ಥಿಗಳು ಜೆರಾಕ್ಸ್‌ ಅಂಗಡಿಗಳಲ್ಲಿ ಸಿಗುವ ಪಠ್ಯಗಳನ್ನೂ ಕೊಂಡು ಓದುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ವಿಶ್ವವಿದ್ಯಾಲಯವು ಮೊಬೈಲ್‌ ಅಪ್ಲಿಕೇಷನ್‌ ಸಿದ್ಧಪಡಿಸಿದೆ. ಈ ಅಪ್ಲಿಕೇಷನ್‌ನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಹಾಕಿ ಕೊಂಡಲ್ಲಿ ಸಿದ್ಧಪಠ್ಯ ಸೇರಿದಂತೆ ಸಾಕಷ್ಟು ಬಗೆಯ ಕಲಿಕಾ ಸಾಮಗ್ರಿಗಳನ್ನು ಡೌನ್‌ ಲೋಡ್‌ ಮಾಡಿಕೊಂಡು ವ್ಯಾಸಂಗ ಮಾಡುವ ಅವಕಾಶ ಸಿಗಲಿದೆ.

ವಿಡಿಯೊ ನೋಡಿ, ಕಲಿಯಿರಿ: ಈಚೆಗಷ್ಟೇ ವಿಶ್ವವಿದ್ಯಾಲಯವು ವಿಡಿಯೊ ಉಪನ್ಯಾಸ ಮಾಲೆ ಕಾರ್ಯಕ್ರಮಕ್ಕೂ ತಯಾರಿ ನಡೆಸಿದೆ. ವಿ.ವಿ.ಯಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಡಿಯೊ ಉಪನ್ಯಾಸಗಳನ್ನು ಚಿತ್ರೀಕರಿಸಲಿದೆ. ಈ ವಿಡಿಯೊಗಳನ್ನು ಕೆಎಸ್‌ಒಯು ಅಪ್ಲಿಕೇಷನ್ ಮೂಲಕ ವಿದ್ಯಾರ್ಥಿಗಳು ವೀಕ್ಷಿಸಬಹುದು. ಇದು ತರಗತಿಯಲ್ಲಿ ಪಾಠ ಕೇಳಿದಂತೆಯೇ ಇರಲಿದೆ. ರಾಜ್ಯದ ಯಾವುದೇ ಭಾಗದಲ್ಲಿರುವ ವಿದ್ಯಾರ್ಥಿಗಳು ಉಚಿತವಾಗಿ ಈ ವಿಡಿಯೊಗಳನ್ನು ವೀಕ್ಷಿಸುವ ಅವಕಾಶ ಸಿಗಲಿದೆ.

‘ಇದು ಡಿಜಿಟಲ್‌ ಯುಗ. ಸಾಂಪ್ರದಾಯಿಕ ಕಲಿಕಾ ಪದ್ಧತಿ ದಿನ ಕಳೆದಂತೆ ಬೆಲೆ ಕಳೆದುಕೊಳ್ಳುತ್ತದೆ. ಇದಕ್ಕೆ ನಾವು ಈಗಿನಿಂದಲೇ ಸಿದ್ಧತೆ ನಡೆಸಬೇಕು. ವಿದ್ಯಾರ್ಥಿಗಳು ಈಗ ಹೆಚ್ಚು ಬುದ್ಧಿವಂತರಿದ್ದಾರೆ. ಆನ್‌ಲೈನ್‌ ವೇದಿಕೆಗಳಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಮೊಬೈಲ್‌ ಅಪ್ಲಿಕೇಷನ್‌ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ’ ಎಂದು ಕೆಎಸ್‌ಒಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ‍ ತಿಳಿಸಿದರು.

ಇದಕ್ಕೆ ಪೂರಕವಾಗಿ 2020ರಿಂದ ವಿ.ವಿ.ಯಲ್ಲಿ ಆನ್‌ಲೈನ್‌ ಕೋರ್ಸ್‌ಗಳು ಶುರುವಾಗಲಿವೆ. ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೇ ಕಲಿಯುವ ಸಾಧ್ಯತೆ ಇದರಿಂದ ತೆರೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ವೆಬ್‌ಸೈಟ್ ಮರು ವಿನ್ಯಾಸ

ಕೆಎಸ್‌ಒಯುನ ವೆಬ್‌ಸೈಟನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ. ವೆಬ್‌ಸೈಟ್‌ ಮೂಲಕವೂ ಸಿದ್ಧಪಠ್ಯ ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ದೇಶದ ಎಲ್ಲ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಗಳನ್ನು ಮಾದರಿಯಾಗಿ ಇರಿಸಿಕೊಂಡು ವೆಬ್‌ಸೈಟ್ ಮರು ವಿನ್ಯಾಸ ಪ್ರಕ್ರಿಯೆ ಆರಂಭವಾಗಿದೆ. ಈ ವೆಬ್‌ಸೈಟ್‌ಗಳ ಗುಣಮಟ್ಟಕ್ಕೆ ಸರಿಸಮವಾಗಿ ವಿನ್ಯಾಸ ಸಿದ್ಧವಾಗುತ್ತದೆ. ವಿನ್ಯಾಸಕ್ಕೆ ಮಾತ್ರ ಇದು ಸೀಮಿತವಾಗದೆ ವಿಷಯಾಧಾರಿತವಾಗಿಯೂ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ಪ್ರೊ.ವಿದ್ಯಾಶಂಕರ್ ತಿಳಿಸಿದರು.
ಡಿಜಿಟಲ್‌ ವೇದಿಕೆಗಳಿಗೆ ವಿಶ್ವವಿದ್ಯಾಲಯವನ್ನು ಅಣಿಗೊಳಿಸಬೇಕು. ಇದರಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಏರಿಕೆಯಾಗಲಿದೆ ಎಂದು ಪ್ರೊ.ಎಸ್‌.ವಿದ್ಯಾಶಂಕರ್ ಅಭಿಪ್ರಾಯಪಟ್ಟರು.

-ನೇಸರ ಕಾಡನಕುಪ್ಪೆ
ಕೃಪೆ : ಪ್ರಜಾವಾಣಿ ವಾರ್ತೆ
————
key words : karnatka.state.open.university ( KSOU )-create-mobile-application-for-the-benifit-of-students-vc-vidhya.shankar