ಬೆಂಗಳೂರು ಗ್ರಾಮಾಂತರ, ಅಕ್ಟೋಬರ್, 29,2025 (www.justkannada.in): ನೆಲಮಂಗಲ ಟೌನ್ ನ ಕುಣಿಗಲ್ ಬೈಪಾಸ್ ನಲ್ಲಿ ರಸ್ತೆ ಹಾಗೂ ಫುಟ್ ಪಾತ್ ಒತ್ತುವರಿಯನ್ನು ಶೀಘ್ರ ತೆರವುಗೊಳಿಸಲು ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಸೂಚಿಸಿದರು.
ನೆಲಮಂಗಲ ತಾಲ್ಲೂಕು ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕುಣಿಗಲ್ ಬೈಪಾಸ್ ರಸ್ತೆಯ ಎಡ ಭಾಗದಲ್ಲಿ ವಿವಿಧ ವಾಣಿಜ್ಯ, ಅಂಗಡಿ ಕಟ್ಟಡಗಳು ರಸ್ತೆ ಹಾಗೂ ಫುಟ್ ಪಾತ್ ಒತ್ತುವರಿ ಮಾಡಿದ್ದಾರೆ. ಒಂದು ವಾರದೊಳಗೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಿದರು.
ನೆಲಮಂಗಲ ಟೌನ್ ನ ಕುಣಿಗಲ್ ಸರ್ಕಲ್ ನಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಬೆಂಗಳೂರು ಕಡೆಯಿಂದ ಕುಣಿಗಲ್, ಹಾಸನ ಕಡೆ ಹೋಗುವ ಹಾಗೆ ಡಾಬಸ್ ಪೇಟೆ ಕಡೆ ಹೋಗುವ ವಾಹನಗಳಿಗೆ ಕುಣಿಗಲ್ ಬೈಪಾಸ್ ನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಬೈಪಾಸ್ ರಸ್ತೆ ಕಿರಿದಾಗಿದ್ದು, ವಾಣಿಜ್ಯ ಅಂಗಡಿ ಮಳಿಗೆಗಳು ರಸ್ತೆ ಒತ್ತುವರಿ ಮಾಡಿರುವುದು ಟ್ರಾಫಿಕ್ ಸಮಸ್ಯೆಗೆ ಕಾರಣ. ಜೊತೆಗೆ ವಾಹನಗಳು ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದು ಮತ್ತೊಂದು ಕಾರಣ. ಒತ್ತುವರಿ ತೆರವುಗೊಳಿಸಿದ ನಂತರ ಬೈಪಾಸ್ ರಸ್ತೆ ಅಗಲೀಕರಣ ಮಾಡಿ ವಾಹನಗಳು ಸುಗಮವಾಗಿ ಸಂಚರಿಸುವಂತೆ ಕ್ರಮ ವಹಿಸಿ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.
ಕುಣಿಗಲ್ ಬೈಪಾಸ್ ಸರ್ಕಲ್ ನಿಂದ ನೆಲಮಂಗಲ ಕಡೆ ತಿರುವಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಾಗಿದ್ದು ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ರಸ್ತೆ ಅಪಘಾತಗಳು ತಡೆಗಟ್ಟಲು ಕ್ರಮ:ಎಸ್ಪಿ ಸಿಕೆ ಬಾಬಾ
ನೆಲಮಂಗಲ ವ್ಯಾಪ್ತಿಯಲ್ಲಿ 22 ಅಪಘಾತ ವಲಯಗಳು (ಬ್ಲಾಕ್ ಸ್ಪಾಟ್) ಗುರ್ತಿಸಲಾಗಿದೆ. ಆ ವಲಯಗಳಲ್ಲಿ ಸ್ಕೈ ವಾಕ್, ಜಂಕ್ಷನ್, ಮೇಲ್ಸೇತುವೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನಿಡಲಾಗಿದೆ. ಕುಣಿಗಲ್ ಬೈಪಾಸ್ ವೃತ್ತದಲ್ಲಿ ರಸ್ತೆ ಪಕ್ಕದಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ದಂಡ ವಿಧಿಸುವುದರ ಜೊತೆಗೆ ಸೂಕ್ತ ಮುನ್ನೆಚ್ಚರಿಕೆ ನೀಡಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 48,75 ರಲ್ಲಿ ಎಲ್ಲೆಲ್ಲಿ ಅಪಘಾತಗಳು ಹೆಚ್ಚಾಗುತ್ತವೆ ಅಂತಹ ಕಡೆ ಸಿಸಿಟಿವಿ ಅಳವಡಿಸಬೇಕು. ಭಾರಿ ಗಾತ್ರದ ಕಂಟೇನರ್ ವಾಹನಗಳಿಂದ ಅಪಘಾತಗಳು ಹೆಚ್ಚುತ್ತಿವೆ. ಟ್ರಾಫಿಕ್ ನಿಯಮಗಳ ಬಗ್ಗೆ ಗೊತ್ತಿರುವುದಿಲ್ಲ, ಅನುಸರಿಸುವುದಿಲ್ಲ ಅಂತವರಿಗೆ ಅರಿವು ಮೂಡಿಸಬೇಕು. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಟ್ರಾಫಿಕ್ ಸಮಸ್ಯೆ, ಅಪಘಾತಗಳನ್ನು ತಡೆಗಟ್ಟಲು ಸಾಧ್ಯ ಎಂದು ಎಸ್ಪಿ ಸಿಕೆ ಬಾಬಾ ಹೇಳಿದರು.
ಸಭೆಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪಿಡಬ್ಲ್ಯೂಡಿ ನ ಎಕ್ಸಿಕ್ಯುಟಿವ್ ಇಂಜಿನಿಯರ್ ಚಂದ್ರಶೇಖರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಯ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.
Key words: DC, notice , clear, road, foot path, encroachment, Kunigal Bypass







