ಮೈಸೂರು,ಅಕ್ಟೋಬರ್,28,2025 (www.justkannada.in): ಕಾಂಗ್ರೆಸ್ ಗೆ ಸಿಎಂ ಸಿದ್ದರಾಮಯ್ಯ ಅನಿವಾರ್ಯ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ನೀಡಿದ್ದ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸಾಥ್ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ರಾಜ್ಯಕ್ಕೆ ಸಿದ್ದರಾಮಯ್ಯ ಸಿಎಂ ಆಗಿರುವುದು ಅನಿವಾರ್ಯ. ಬಹುತೇಕ ಕಾಂಗ್ರೆಸ್ ಪಕ್ಷದ ಶಾಸಕರ ಅಭಿಪ್ರಾಯ ಇದೇ ಇದೆ. ಶಾಸಕರು, ಸಚಿವರು ಸಿಎಂ ಆಗಿ ಸಿದ್ದರಾಮಯ್ಯ ಇರಬೇಕು ಎಂದಿದ್ದಾರೆ ಎಂದು ಹೇಳಿಕೆ ನೀಡಿದರು ಈ ಮೂಲಕ ಮಾಜಿ ಸಚಿವ ರಾಜಣ್ಣ ಹೇಳಿಕೆ ಸರಿಯಿದೆ ಎಂದು ಸಮ್ಮತಿ ಸೂಚಿಸಿದರು.
ಇನ್ನು ಹೈಕಮಾಂಡ್ ಹೇಳಿದರೆ ನಾನೇ ಪೂರ್ಣಾವಧಿ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಸಿಎಂ ಬದಲಾವಣೆ ಕುರಿತು ಚರ್ಚೆ ಆಗಿಲ್ಲ. ಪಕ್ಷದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆಸಿಲ್ಲ. ಬದಲಾವಣೆ ವಿಚಾರ ನನಗಾಗಲಿ, ತಂದೆಯವರಿಗಾಗಲಿ ಗೊತ್ತೇ ಇಲ್ಲ. ಯಾರೇ ಸಿಎಂ ಆಗಬೇಕಾದರೂ ಹೈಕಮಾಂಡ್ ಒಪ್ಪಿಗೆ ಬೇಕು. ಸಿದ್ದರಾಮಯ್ಯ ಮುಂದುವರಿಯಬೇಕಾದರೂ ಕೂಡ ಒಪ್ಪಿಗೆ ಅನಿವಾರ್ಯ. ಇದೇ ಮಾತನ್ನ ತಂದೆಯವರು ಹೇಳಿರುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮುನಿಯಪ್ಪ ಸಿಎಂ ಆಗುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಮಂದಿ ಆಕಾಂಕ್ಷಿಗಳಿದ್ದಾರೆ. ಅವರೆಲ್ಲರಿಗೂ ಸಿಎಂ ಆಗಬೇಕು ಅನ್ನೋ ಆಸೆ ಇದೆ. ಅದನ್ನ ನಾವು ತಪ್ಪು ಅಂತ ಹೇಳಲು ಸಾಧ್ಯವಿಲ್ಲ ಎಂದರು.
Key words: CM, Siddaramaiah, Mysore, MLC, Yathindra Siddaramaiah







