12 ದಿನಗಳಲ್ಲಿ 23 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಹಾಸನಾಂಬೆ ದರ್ಶನ: ನಾಳೆ ಕೊನೇ ದಿನ

ಹಾಸನ, ಅಕ್ಟೋಬರ್,​​ 21,2025 (www.justkannada.in):  ವರ್ಷದಲ್ಲಿ ಒಂದು ಬಾರಿ ಬಾಗಿಲು ತೆರೆಯುವ ಹಾಸನಾಂಬೆಯ ಉತ್ಸವಕ್ಕೆ ನಾಳೆ ತೆರೆ ಬೀಳಲಿದ್ದು ನಾಳೆ ಸಾರ್ವಜನಿಕರ ದರ್ಶನಕ್ಕೆ ಕೊನೇ ದಿನವಾಗಿದೆ.

ಹಾಸನಾಂಬೆಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತರು ಹರಿದು ಬರುತ್ತಿದ್ದು ಕಳೆದ 12 ದಿನಗಳಲ್ಲಿ ಬರೊಬ್ಬರಿ 23 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಅಕ್ಟೋಬರ್ 10ರಿಂದ ಆರಂಭವಾಗಿರುವ ಸಾರ್ವಜನಿಕ ದರ್ಶನ ಅಕ್ಟೋಬರ್ 22 ಅಂದರೆ ನಾಳೆಯೇ ಕೊನೆಯಾಗಲಿದೆ.

ಕಳೆದ 12 ದಿನಗಳಿಂದ ದೇಶದ ಮೂಲೆ ಮೂಲೆಗಳಿಂದ ಹರಿದು ಬಂದ ಭಕ್ತ ಸಾಗರ ಹಾಸನಾಂಬೆಯ ಆಶೀರ್ವಾದ ಪಡೆಯುತ್ತಿದ್ದಾರೆ. ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ 12ನೇ ದಿವನಾದ ಇಂದು ಬೆಳಿಗ್ಗೆ  ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ಬೆಳಿಗ್ಗೆ ಖಾಲಿ ಖಾಲಿಯಾಗಿದ್ದ ಸರತಿ ಸಾಲುಗಳು ಖಾಲಿ ಇದೀಗ ಭರ್ತಿಯಾಗಿದ್ದು ಧರ್ಮದರ್ಶನದ ಸಾಲು ಭಕ್ತರಿಂದ ತುಂಬಿ ತುಳುಕುತ್ತಿದೆ.

ವರ್ಷದಲ್ಲಿ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆಯನ್ನ ಕಣ್ತುಂಬಿಕೊಳ್ಳಲು ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲ ದೇಶದ ಹಲವು ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.

Key words:  23 lakh, devotees, visit, Hasanamba Temple, 12 days