ಮೈಸೂರು,ಅಕ್ಟೋಬರ್,14,2025 (www.justkannada.in): ಅಕ್ಟೋಬರ್ 17ರಂದು ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು ಈಗಾಗಲೇ 24 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಮೈಸೂರಿನ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್, ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಈಗಾಗಲೇ 24 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದು, 15 ಸಾವಿರ ಮಂದಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 17ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ. ರಾಜ್ಯದ ವಿವಿಧೆಡೆಗಳಿಂದ ಆಗಮಿಸಲಿರುವ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಯುವನಿಧಿ ಯೋಜನೆಯಡಿ ಈಗಾಗಲೇ ನೋಂದಣಿಯಾಗಿರುವ ಮೈಸೂರು ವಿಭಾಗದ 43577 ಫಲಾನುಭವಿಗಳ ಜೊತೆಗೆ ಇತರೆ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಅವಕಾಶ ಹೊಂದಿರುವ ಉದ್ಯೋಗದಾತರೊಂದಿಗೆ ನೇರ ಭೇಟಿಗಾಗಿ ಅವಕಾಶ ಕಲ್ಪಿಸಲು ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದುವರೆಗೂ 221 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದು ಮತ್ತಷ್ಟು ಕಂಪನಿಗಳು ಸೇರ್ಪಡೆ ಆಗಲಿವೆ ಎಂದು ಮಾಹಿತಿ ನೀಡಿದರು.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಶರಣಪ್ರಕಾಶ್ ಪಾಟೀಲ್, ದಸರಾದಲ್ಲಿ ಬಲೂನ್ ವ್ಯಾಪಾರಕ್ಕೆ ಆ ಕುಟುಂಬ ಬಂದಿತ್ತು. ನಾವು ಆ ಕುಟುಂಬದ ಜೊತೆ ನಿಲ್ಲುತ್ತೇವೆ. ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಚರ್ಚೆ ಮಾಡುತ್ತೇವೆ. ಆಧಾರ್ ಕಾರ್ಡ್ ಸೇರಿದಂತೆ ಕುಟುಂಬಕ್ಕೆ ಅವಶ್ಯಕತೆ ಇರುವ ಸೌಲಭ್ಯವನ್ನು ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಬೆದರಿಕೆ ಕರೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಶರಣಪ್ರಕಾಶ್ ಪಾಟೀಲ್, ಅವರಿಗೆ ಕಾಲ್ ಬಂದಿದೆ ಅನಿಸುತ್ತೆ ಅದಕ್ಕಾಗಿ ಹೇಳಿದ್ದಾರೆ. ಕೇಂದ್ರದಲ್ಲಿ ಮೋದಿ ಬಂದಮೇಲೆ ಈ ರೀತಿ ಆಗುತ್ತಿದೆ. 2014ರ ಹಿಂದೆ ಈ ರೀತಿ ಇರಲಿಲ್ಲ. ಯಾರಿಗೆ ಎಲ್ಲರನ್ನೂ ಒಪ್ಪಿಕೊಳ್ಳೋ ಭಾವನೆ ಇಲ್ಲ ಅವರು ಈ ರೀತಿ ಮಾಡುತ್ತಾರೆ. ಈ ರೀತಿಯ ಮನೋಭಾವನೆ ಯಾರಿಗಿದೆ ಎಂದು ನಿಮಗೂ ಗೊತ್ತು. ಐಡಿಯಾಲಜಿ ವಿಚಾರಕ್ಕೂ ಯಾರು ಯಾರನ್ನು ಹೆದರಿಸಬಾರದು ಎಂದರು.
ಸಿಎಂ ಡಿನ್ನರ್ ಗೆ ನಾನು ಹೋಗಿದ್ದೆ. ನವೆಂಬರ್ ಕ್ರಾಂತಿ ಮಾಧ್ಯಮದ ಸೃಷ್ಟಿ ಅಷ್ಟೇ. ಸಂಪುಟ ಪುನಾರಚನೆ ಬಗ್ಗೆ ಚರ್ಚೆ ಆಗಿಲ್ಲ. ಕೇವಲ ಊಟಕ್ಕೆ ಸೇರಿದ್ದವು ಅಷ್ಟೇ. ಇದೆಲ್ಲವೂ ಮಾದ್ಯಮದ ಸೃಷ್ಟಿ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು.
Key words: Mysore, job fair, Minister, Sharan Prakash Patil