ಹತ್ಯೆ ಸ್ಕೆಚ್: ಪೊಲೀಸರಿಗೆ ಮಾಹಿತಿ ನೀಡಿದ್ದ ಗಿಲ್ಕಿ ವೆಂಕಟೇಶ್..!

ಮೈಸೂರು,ಅಕ್ಟೋಬರ್,7,2025 (www.justkannada.in): ಮೈಸೂರಿನ ದೊಡ್ಡಕೆರೆ ಮೈದಾನದ ಬಳಿ ದಸರಾ ವಸ್ತುಪ್ರದರ್ಶನ ರಸ್ತೆಯಲ್ಲಿ ವೆಂಕಟೇಶ್ ಅಲಿಯಾಸ್ ಗಿಲ್ಕಿ ವೆಂಕಟೇಶ್ ಹತ್ಯೆಯಾಗಿದ್ದು ಕೊಲೆ ಮಾಡಿದ್ದ ವ್ಯಕ್ತಿಗಳು ಈ ಹಿಂದೆ ಚಲನ-ವಲನ ವೀಕ್ಷಿಸಿ ಕೊಲೆ ಮಾಡಲು ಹೊಂಚು ಹಾಕುತ್ತಿದ್ದರು ಎಂದು ಮೃತ ವೆಂಕಟೇಶ್ ಪೊಲೀಸರಿಗೆ ತಿಳಿಸಿದ್ದನು ಎಂಬ ಮಾಹಿತಿ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಹತ್ಯೆಗೈದ ವ್ಯಕ್ತಿಗಳು ಈ ಹಿಂದೆ ಹಲವು ದಿನಗಳಿಂದ ವೆಂಕಟೇಶ್ ಓಡಾಡುತ್ತಿದ್ದ ಸ್ಥಳಗಳಲ್ಲಿ ನಿಂತು ಚಲನ-ವಲನಗಳನ್ನು ವೀಕ್ಷಿಸಿ ಕೊಲೆ ಮಾಡಲು ಹೊಂಚುಹಾಕುತ್ತಿದ್ದರು ಎಂದು ವೆಂಕಟೇಶ್ ಪೋಲಿಸರಿಗೆ ಮಾಹಿತಿ ನೀಡಿದ್ದರು. ಆದರೂ ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಕೊಲೆಗೆ ಯತ್ನ ನಡೆದಿತ್ತು..

ಈ ಹಿಂದೆ ಗುಂಪು ವೆಂಕಟೇಶ್‌ ನ ಮೇಲೆ ಎರಡು ಬಾರಿ ಹಲ್ಲೆ ನಡೆಸಿ ಕೊಲೆಗೆ ವಿಫಲ ಯತ್ನ ನಡೆಸಿತ್ತು. ಆದರೆ ಇದೀಗ ಮೂರನೇ ಬಾರಿಗೆ ಜನನಿಬಿಡ ಪ್ರದೇಶದಲ್ಲೇ ದಾಳಿ ಮಾಡಿ ಆತನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆಯೂ ವೆಂಕಟೇಶ್ ಪೋಲಿಸರಿಗೆ ದೂರು ನೀಡಿದ್ದರು ಎಂದು ಕುಟುಂಬ ಸದಸ್ಯರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಫೋಟೋ ತೆಗೆದ ಸಾರ್ವಜನಿಕರು:

ಘಟನೆ ನಡೆದ ಸ್ಥಳದಲ್ಲಿ ಕಾರು ಅಡ್ಡಗಟ್ಟಿ ವ್ಯಕ್ತಿಯನ್ನು ಹೊರಕ್ಕೆಳೆದು ಮಚ್ಚು-ಲಾಂಗ್‌ ಗಳಿಂದ ಕೊಚ್ಚಿ ಕೊಲೆಗೈದ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹರಿದು ಬಿಟ್ಟಿದ್ದಾರೆ. ಆದರೆ ವೀಡಿಯೋ ಮಾಡಲು ಪ್ರಯತ್ನಿನಿಸಿದರಾದರೂ ದುಷ್ಕರ್ಮಿಗಳು ಅವರತ್ತ ಲಾಂಗ್ ತೋರಿದ್ದರಿಂದ ಹೆದರಿ, ರೆಕಾರ್ಡ್ ಮಾಡಲಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಪೋಲಿಸ್ ಕಮೀಷನರ್ ಸೀಮಾ ಲಾಟ್ಕರ್, ಡಿಸಿಪಿಗಳಾದ ಕೆ.ಎಸ್. ಸುಂದರ್‌ ರಾಜ್, ಆರ್.ಎನ್. ಬಿಂದುಮಣಿ, ದೇವರಾಜ ಉಪ ವಿಭಾಗದ ಎಸಿಪಿ ಕೆ. ರಾಜೇಂದ್ರ, ನಜರ್‌ ಬಾದ್ ಠಾಣೆ ಇನ್ಸ್ ಪೆಕ್ಟರ್ ಮಹದೇವಸ್ವಾಮಿ, ದೇವರಾಜ ಠಾಣೆ ಇನ್ಸ್ ಪೆಕ್ಟರ್ ರಘು, ಸಿಸಿಬಿ ಇನ್ಸ್ ಪೆಕ್ಟರ್ ಲೇಪಾಕ್ಷ, ಶ್ವಾನದಳ ಮತ್ತು ನಗರ ಬೆರಳಚ್ಚು ಮುದ್ರೆ ವಿಭಾಗದ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಿಸಿಕೊಂಡಿರುವ ನಜರ್‌ ಬಾದ್ ಠಾಣೆ ಪೋಲಿಸರು ಸ್ಥಳ ಮಹಜರು ನಡೆಸಿ, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದಿರುವ ಫೋಟೋ ಹಾಗೂ ಆ ಮಾರ್ಗದಲ್ಲಿರುವ ಸಿಸಿ ಕ್ಯಾಮರಾಗಳ ಫುಟೇಜ್‌ ಗಳ ಸುಳಿವಿನ ಜಾಡು ಹಿಡಿದ ಪೋಲಿಸರು ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗಾಗಿ ಎರಡು ತನಿಖಾ ತಂಡಗಳನ್ನು ರಚಿಸಲಾಗಿದ್ದು ಈಗಾಗಲೇ ಆರೋಪಿಗಳ ಬಗ್ಗೆ ಕೆಲ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

Key words: Mysore, Murder, sketch, Gilky Venkatesh, informed, police