ಮೈಸೂರು, ಅಕ್ಟೋಬರ್ 05, 2022 (www.justkannada.in): ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಸ್.ಎಲ್.ಭೈರಪ್ಪನವರು ನಿಧನರಾದ ಸುದ್ದಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದಾಗ ಮೈಸೂರಿನ ಜನತೆಗೆ, ಅಭಿಮಾನಿಗಳಿಗೆ ಹಾಗೂ ದೇಶದ ಜನತೆಗೆ ಅತ್ಯಂತ ನೋವಿನ ವಿಚಾರವಾಗಿ ಹೊರಹೊಮ್ಮಿತು. ಮರಣಹೊಂದಿದ 2ನೇ ದಿನದಂದು ರಾಷ್ಟ್ರೋತ್ಥಾನ ಆಸ್ಪತ್ರೆಯಿಂದ ಬೆಂಗಳೂರಿನ ಜನತೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿದ ನಂತರ ಮೈಸೂರಿಗೆ ಪಾರ್ಥಿವ ಶರೀರವನ್ನು ಕೊಂಡ್ಯೋದು ಕಲಾಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿದ ಸನ್ನಿವೇಶದಲ್ಲಿ ಎಲ್ಲರಿಗೂ ದಿಗ್ಬ್ರಮೆಯಾಗುವ ರೀತಿಯಲ್ಲಿ ಯಾವುದೋ ಒಂದು ವಿಲ್ ಮಾಡಿದ್ದಾರೆ ಎನ್ನುವ ವಿಚಾರ ವಾಟ್ಸಾಪ್ ಗಳಲ್ಲಿ ಶೇರ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮೈಸೂರಿನ ಮಹಾಜನತೆಗೆ ಎಸ್.ಎಲ್. ಭೈರಪ್ಪ ನವರ ಅಂತ್ಯ ಸಂಸ್ಕಾರ ಒಂದು ಗೊಂದಲದ ಗೂಡಾಗಬಹುದೇನೋ ಎನ್ನುವ ಅನುಮಾನ ಕಾಡಲಾರಂಬಿಸಿತು. ಏಕೆಂದರೆ ಆ ವಿಲ್ನಲ್ಲಿ ಅವರ ಸ್ವಂತ ಮಕ್ಕಳಾದ ಶ್ರೀ ರವಿಶಂಕರ್ ಹಾಗೂ ಶ್ರೀ ಉದಯ್ ಶಂಕರ್ ರವರು ಅಂತಿಮ ವಿಧಿವಿಧಾನಗಳನ್ನು ಮಾಡಬಾರದು, ಆ ವಿಧಿವಿಧಾನಗಳನ್ನು ಸಹನಾ ವಿಜಯ್ ಕುಮಾರ್ ರವರು ಮಾಡಬೇಕು ಎಂಬ ಅಂಶ ಬಹಿರಂಗಗೊಂಡಿದ್ದರಿಂದ ಆತಂಕ ಮನೆಮಾಡಿತ್ತು. ಆದರೆ ಮರುದಿನ ನಡೆದಂತಹ ಅಂತಿಮ ಯಾತ್ರೆಯಲ್ಲಿ ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರವನ್ನು ಅವರು ಸುದೀರ್ಘ ಕಾಲ ವಾಸಮಾಡಿದಂತಹ ಸ್ವಗೃಹಕ್ಕೆ ತರಲಾಯಿತು. ತದನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್ ನಲ್ಲಿ ಬ್ರಾಹ್ಮಣ ವಿಧಿವಿಧಾನ ರೀತಿಯಲ್ಲೇ ಸರ್ಕಾರಿ ಗೌರವದೊಂದಿಗೆ ಅವರ ಮಕ್ಕಳಿಂದಲೇ ಅಂತ್ಯಕ್ರಿಯೆಯು ನೆರವೇರಿದ್ದನ್ನು ನಾವು ಪ್ರತ್ಯಕ್ಷವಾಗಿ ನೋಡುವಂತಾಯಿತು. ಅದೇ ಸಂದರ್ಭದಲ್ಲೇ ಸಹನ ವಿಜಯ್ ಕುಮಾರ್ ರವರು ಹಾಗೂ ಇತರರು ಪಾಲ್ಗೊಂಡಿದ್ದನ್ನು ಸಾರ್ವಜನಿಕವಾಗಿ ಗಮನಿಸಿದೆವು.
ನಾನು ಪ್ರಮತಿ ಶಾಲೆಯ ಕಾರ್ಯದರ್ಶಿಯಾಗಿ ಹತ್ತಿರದಿಂದ ಶ್ರೀ ಎಸ್.ಎಲ್. ಭೈರಪ್ಪ ನವರು ಮತ್ತು ಅವರ ಕುಟುಂಬದವರನ್ನು ಹಲವಾರು ವರ್ಷಗಳಿಂದ ಹಲವಾರು ವಿಚಾರಗಳಿಗೆ ಭೇಟಿ ಮಾಡುತ್ತಿದ್ದೆ, ಹಾಗಾಗಿ ಈ ಸನ್ನಿವೇಶವನ್ನು ನೋಡುತ್ತಿದ್ದ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಸಾಕಷ್ಟು ವಿಚಾರಗಳು ಹರಿದಾಡುತ್ತಿದ್ದವು. ಅದೇನೆಂದರೆ ಶ್ರೀ ಭೈರಪ್ಪ ನವರನ್ನು ವಿವಾಹವಾದ ಶ್ರೀಮತಿ ಸರಸ್ವತಮ್ಮನವರು ಸಂಗಾತಿಯಾಗಿ 94 ನೇ ವಯಸ್ಸಿನವರೆಗೂ ಕೂಡ ಶ್ರೀ ಭೈರಪ್ಪನವರ ಆಗು- ಹೋಗುಗಳನ್ನು ನೋಡಿಕೊಂಡು, ಅವರಿಗೆ ಆಹಾರ, ಆರೋಗ್ಯ, ವಿವಿಧ ಉಪಚಾರಗಳನ್ನು ಮಾಡುತ್ತಾ ಮಡದಿಯಾಗಿ ಸೇವೆ ಮಾಡಿದ ಶ್ರೀಮತಿ ಸರಸ್ವತಮ್ಮನವರು ಕೊನೆಯ 8 ತಿಂಗಳಲ್ಲಿ ಶ್ರೀ ಭೈರಪ್ಪನವರಿಗೆ ಬೇಡವಾದರ? ಅತ್ಯಂತ ಕಷ್ಟ ಕಾಲದಲ್ಲಿ ಕುಟುಂಬವನ್ನು ಸಮತೋಲನದಿಂದ ನಡೆಸಿ, ಮಕ್ಕಳಿಗೆ ಶಿಕ್ಷಣ ಕೊಟ್ಟು, ಶ್ರೀ ಭೈರಪ್ಪನವರಿಗೆ ಎಲ್ಲಾ ವಿಚಾರದಲ್ಲಿ ಸಹಕಾರಿಯಾಗಿ, ಅವರ ಯಶಸ್ಸನ್ನೇ ತಮ್ಮ ಯಶಸ್ಸು ಎಂದು ಖುಷಿ ಪಡುತ್ತಾ ಜೀವನವನ್ನೇ ಅವರಿಗಾಗೇ ಮುಡಿಪಾಗಿಟ್ಟ ಶ್ರೀಮತಿ ಸರಸ್ವತಮ್ಮನವರು ಲೋಕದ ದೃಷ್ಟಿಯಲ್ಲಿ ಕಳಂಕ ಹೊಂದುವಂತವರಾದರ ?
ಇದೇ ಸಂದರ್ಭದಲ್ಲಿ ಇವತ್ತಿನ ಎಲ್ಲಾ ಕುಟುಂಬಗಳಲ್ಲಿ ಶಿಕ್ಷಣ ಪಡೆದ ಮಕ್ಕಳು ಅವರ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಉದ್ಯೋಗಗಳಿಗಾಗಿ ಬೇರೆ –ಬೇರೆ ಊರುಗಳಿಗೆ, ಕೆಲವು ಸಂದರ್ಭದಲ್ಲಿ ಹೊರದೇಶಕ್ಕೂ ಹೋಗಿ ನೆಲೆಕಟ್ಟಿಕೊಂಡಿರುವ ರೀತಿಯಲ್ಲೇ ಶ್ರೀ ಭೈರಪ್ಪನವರ ಮಕ್ಕಳು ಸಹ ಬೇರೆ ಊರು ಹಾಗೂ ದೇಶದಲ್ಲಿ ನೆಲೆ ಕಟ್ಟಿಕೊಂಡಿರುವುದು ವಾಸ್ತವಾಂಶವಾಗಿದೆ. ಆ ಮಕ್ಕಳು ಓದುವ ಕಾಲದಲ್ಲಿ ಇದ್ದಂತಹ ಬಡತನದ ಬವಣೆ ಮತ್ತು ಭೈರಪ್ಪನವರ ಸಾಹಿತ್ಯ ಲೋಕದಲ್ಲಿ ಅನ್ವೇಷಣೆಗಾಗಿ ಪೂರ್ಣಾವಧಿ ತೊಡಗಿಕೊಂಡಂತಹ ಸಂದರ್ಭದಲ್ಲಿ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದು, ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಬಂದಿರುವುದಲ್ಲಿ ಅವರ ಸ್ವ-ಸಾಮರ್ಥ್ಯ ಹಾಗೂ ಶ್ರೀಮತಿ ಸರಸ್ವತಮ್ಮನವರ ಒತ್ತಾಸೆ ಹೆಚ್ಚು ಕಾರಣ ಎಂದರೆ ತಪ್ಪಾಗಲಾರದು ಎಂದು ನಾನು ಭಾವಿಸುತ್ತೇನೆ.
ಎಸ್.ಎಲ್. ಭೈರಪ್ಪನವರ ಮಕ್ಕಳು ಪ್ರಸ್ತುತ ಸ್ಥಿತಿವಂತರಾಗಿರುವುದರಿಂದ ಅವರಿಗೆ ಭೈರಪ್ಪನವರು ಮನವರಿಕೆ ಮಾಡಿಕೊಟ್ಟು, ಏನಾಗಬೇಕು ಎಂಬುದನ್ನು ಶ್ರೀ ಪ್ರಧಾನ್ ಗುರುದತ್, ಶ್ರೀ ಜಿ,ಎಲ್. ಶೇಖರ್, ಶ್ರೀ ರವೀಂದ್ರ ಜೋಷಿ ಹಾಗೂ ಇನ್ನಿತರ ಆತ್ಮೀಯ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಗಳಿಸಿದ ಹಣವನ್ನು ಮುಂದೆ ಯಾವ ರೀತಿಯಲ್ಲಿ ವಿನಿಯೋಗ ಮಾಡಬೇಕು ಎಂಬುದನ್ನು ತಿಳಿಸಿದ್ದರೆ, ಅದಕ್ಕೆ ಲೋಪವಿಲ್ಲದೇ ಸಮಾಜಕ್ಕೆ ತಲುಪುತ್ತಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
80 ರ ನಂತರ ಮರೆವು ಸಾಕಷ್ಟು ಜನರಲ್ಲಿ ಬರುವುದು ನಮ್ಮೆಲ್ಲರಿಗೂ ತಿಳಿದ ವಿಚಾರ. ಆದರೆ ಶ್ರೀ ಎಸ್.ಎಲ್. ಭೈರಪ್ಪನವರು 92 ರ ಆಜುಬಾಜಿನಲ್ಲಿ ಈ ರೀತಿ ಆಗಿರುವುದನ್ನು ನಾವು ಗಮನಿಸಬಹುದು. ಏಕೆಂದರೆ ಶ್ರೀ ಎಸ್.ಎಲ್. ಭೈರಪ್ಪವನರಿಗೆ 2023 ರಲ್ಲಿ ಪದ್ಮಭೂಷಣ ಪ್ರಶಸ್ತಿ ಬಂದ ಸಂದರ್ಭದಲ್ಲಿ “ವಂದನೆ-ಅಭಿವಂದನೆ” ಕಾರ್ಯಕ್ರಮವನ್ನು ನಾವು ಮತ್ತು ಹಲವು ಸಂಘಸಂಸ್ಥೆಗಳು ಕಲಾಮಂದಿರಲ್ಲಿ ಹಮ್ಮಿಕೊಂಡಂತಹ ಸಂದರ್ಭದಲ್ಲಿ ಶ್ರೀ ಬೈರಪ್ಪನವರು ನುಡಿಗಳಾಡುವ ಸನ್ನಿವೇಶದಲ್ಲಿ ಒಂದಷ್ಟು ವಿಚಾರಗಳನ್ನು ಹೇಳುತ್ತಾ ಜೊತೆಗೆ ವಿಷಯಾಂತರ ಮಾಡಿದ್ದು, ಅಲ್ಲಿದ್ದ ಸಭಿಕರೆಲ್ಲರಿಗೂ ಇವರಿಗೆ ಸ್ವಲ್ಪ ಮರೆವು ಇದೆ ಎಂಬುದನ್ನು ಗಮನಿಸಲು ಸಾಧ್ಯವಾಯಿತು. ನಂತರದ ದಿನಗಳಲ್ಲಿ ಶ್ರೀ ರವೀಂದ್ರ ಜೋಷಿ ರವರ ಮಾತು ಕೇಳುವಾಗ ಗೊತ್ತಾಗಿದ್ದು ಏನೆಂದರೆ, ಯಾರೋ ಸಹಾಯಕರು ಶ್ರೀ ಭೈರಪ್ಪನವರ ಖಾತೆಯಿಂದ ಒಂದಷ್ಟು ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಆ ವಿಚಾರ ಬ್ಯಾಂಕಿನ ಮ್ಯಾನೇಜರ್ ಮೂಲಕ ಅವರ ಮನೆಯವರಿಗೆ ಗೊತ್ತಾಗಿದ್ದು, ಆಗ ಶ್ರೀಮತಿ ಸರಸ್ವತಮ್ಮನವರು ಮತ್ತು ಶ್ರೀ ಉದಯ್ ಶಂಕರ್ ರವರು ಈ ರೀತಿ ಮರೆವು ಇರುವುದನ್ನು ಬಂಡವಾಳವನ್ನಾಗಿ ಮಾಡಿಕೊಂಡು ನಂಬಿಕಸ್ಥರೇ ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ನಿಮ್ಮ ಇಚ್ಚೆಯಂತೆ ನಾವು ನಿರ್ವಹಿಸುತ್ತೇವೆ, ನೀವು ನಿರ್ವಹಿಸುವುದು ಕಷ್ಟ ಆಗುತ್ತಿದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಒಪ್ಪದ ಶ್ರೀ ಭೈರಪ್ಪನವರು ನಂತರದ ದಿನಗಳಲ್ಲಿ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ನಂತರದ ದಿನಗಳಲ್ಲಿ ಮಾರ್ಗದರ್ಶನ ಪಡೆದುಕೊಳ್ಳಲು ಬರುತ್ತಿದ್ದಂತಹ ಸಹನ ವಿಜಯ್ ಕುಮಾರ್ ಮತ್ತು ವಿಶ್ವೇಶ್ವರಭಟ್ ರವರ ಮಾತುಗಳು ಭೈರಪ್ಪ ರವರ ಮನಸ್ಸಿಗೆ ಹಿತ ಅನಿಸಿ ಅವರು ಸತತ 7 ದಶಕಗಳು ತಮ್ಮೊಂದಿಗೆ ಇದ್ದ ಕುಟುಂಬವನ್ನು ಬಿಟ್ಟು, ಬೆಂಗಳೂರಿಗೆ ಕೊನೆಯ 8 ತಿಂಗಳು ಹೊದಂತದ್ದು ವಿಷಾದನೀಯ ವಿಚಾರ.
ಶ್ರೀ ಎಸ್.ಎಲ್. ಭೈರಪ್ಪನವರು ನಾನು ಖ್ಯಾತ ಸಾಹಿತಿ, ಪ್ರಪಂಚದ ಎಲ್ಲಾ ವಿಚಾರಗಳು ನನಗೆ ಸ್ಪಷ್ಟವಾಗಿ ಗೊತ್ತಿದೆ ಎನ್ನುವಂತಹ ಮನಸ್ಥಿತಿ ಮತ್ತು ದಾರ್ಷ್ಟ್ಯದಲ್ಲಿ ಈ ರೀತಿ ಯೋಚನೆ ಮಾಡಿರಲೂಬಹುದು. ಆದರೆ ಆ ವಯಸ್ಸಿನಲ್ಲಿ, ಆ ಕೊನೆ ದಿನಗಳಲ್ಲಿ ಇಂತಹ ಹಿರಿಯರನ್ನು ಅವರ ಕುಟುಂಬದಿಂದ ಬೇರ್ಪಡಿಸುವುದು ಎಷ್ಟು ಸರಿ ಎನ್ನುವುದನ್ನು, ಕರೆದುಕೊಂಡು ಹೋದವರೇ, ಜೊತೆಯಲ್ಲೇ ಇರಿಸಿಕೊಂಡವರೇ ನೂರು ಬಾರಿ ಯೋಚಿಸಬೇಕಿತ್ತು. ಈ ಸಂದರ್ಭದಲ್ಲಿ ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳು ನನಗೆ ನೆನಪಿಗೆ ಬರುತ್ತಿದೆ. ಅದೇನೆಂದರೆ ಇಂದಿನ ಯುವಕ-ಯುವತಿ ಪರಸ್ಪರ ಪ್ರೀತಿಸಿ, ಆ ಯುವತಿ ತನ್ನಿಚ್ಛೆಗೆ ಅಡ್ಡಿ ಬಂದರು ಎಂದು ತನ್ನ ಮನೆಯವರ ವಿರುದ್ಧವಾಗಿ ಹೋಗಿ ತನ್ನ ಇಚ್ಛೆಯಂತೆ ಬದುಕುವುದನ್ನು ನೋಡುತ್ತಿದ್ದೇವೆ. ತನಗೆ ಬಾಲ್ಯದಿಂದ ಶಿಕ್ಷಣ, ಸಂಸ್ಕಾರ ಸರ್ವಸ್ವವನ್ನೂ ನೀಡಿದ ಕುಟುಂಬವನ್ನೇ ದಿಕ್ಕರಿಸಿ ತಾವು ಇಚ್ಛೆ ಪಟ್ಟವರೊಂದಿಗೆ ಹೋಗಿ ತಾವು ಸಂತೋಷವಾಗಿರುವಂತಹ ಸನ್ನಿವೇಶದಲ್ಲಿ, ಆಕೆಯನ್ನು ಸಾಕಿದ ತಂದೆ-ತಾಯಿ, ಕುಟುಂಬ ವರ್ಗದವರು ನೋವಲ್ಲಿರುವುದನ್ನು ಬಹಳಷ್ಟು ಕುಟುಂಬಗಳಲ್ಲಿ ನಾವು ನೋಡುತ್ತೇವೆ.
ಆದರೆ ಶ್ರೀ ಭೈರಪ್ಪನವರ ಪ್ರಕರಣದಲ್ಲಿ ಇದಕ್ಕೆ ವ್ಯತಿರಿಕ್ತ. ಶ್ರೀ ಭೈರಪ್ಪನವರು ಏಳು ದಶಕಗಳ ಕಾಲ ಜೀವನದ ಸಹಧರ್ಮಿಣಿಯಾಗಿದ್ದ ಸರಸ್ವತಮ್ಮ ನವರನ್ನ ಯಾವ್ದೂ ಒಂದ್ ಇಷ್ಟು ಸಣ್ಣ ಪುಟ್ಟ ವಿಚಾರಗಳಿಂದ ಭಿನ್ನಾಭಿಪ್ರಾಯ ಮೂಡಿ, ಆ ವಯಸ್ಸಿನಲ್ಲಿ ಹೊರಗಡೆ ಹೋದದ್ದು, ಶ್ರೀ ಭೈರಪ್ಪನವರ ವಯಸ್ಸಿನ ಮರೆವು ಮತ್ತು ಇತರೆ ಕಾರಣಗಳು ಮೂಲಪ್ರೇರಣೆ ಆಗಿರಬಹುದು ಅಂತ ನನಗೆ ಅನಿಸುತ್ತದೆ. ಆದರೆ ಅವರನ್ನ ಕರೆದುಕೊಂಡು ಹೋಗೋವಂತವರು ಈ ರೀತಿ ಭೈರಪ್ಪನವರನ್ನು ತಾಳಕ್ಕೆ ತಕ್ಕಂತೆ ಕುಣಿಯೋದನ್ನು ಬಿಟ್ಟು, ಅವರಿಗೆ ಸಮಾಧಾನದಿಂದ ವಸ್ತು ಸ್ಥಿತಿ ವಿವರಣೆ ಮಾಡಿ ಮೈಸೂರಲ್ಲಿ ಉಳಿಯೋ ಆಗೇ ಮಾಡಬಹುದಿತ್ತು ಅಥವಾ ಅನಿವಾರ್ಯವಾದರೆ ಶ್ರೀಮತಿ ಸರಸ್ವತಮ್ಮನವರನ್ನು ಸೇರಿದಂತೆ ಬೆಂಗಳೂರಿನಲ್ಲಿ ವೃದ್ದ ದಂಪತಿಗಳು ವಾಸಮಾಡುವಂತಹ ಅವಕಾಶ ಕಲ್ಪಿಸಿಕೊಡಬೇಕಿತ್ತು. ಆದರೆ ಇದನ್ನು ಮಾಡದೇ ಆ ವಯಸ್ಸಿನಲ್ಲಿ ಮೂಡಿದ ಭಾವನೆಗಳನ್ನೆ ಬಳಸಿಕೊಂಡು ಅವರ ಕುಟುಂಬವನ್ನ ಬೇರ್ಪಡಿಸಿದ್ದು ಮಾತ್ರ ಇತಿಹಾಸದಲ್ಲಿ ಎಂದಿಗೂ ಕ್ಷಮಿಸಲಾರದ ಘಟನೆ ಎಂದರೆ ತಪ್ಪಾಗಲಾರದು. ಶ್ರೀ ಭೈರಪ್ಪನವರು ಸಾಹಿತ್ಯದಲ್ಲಿ ಹೇಳುವಂತೆ ಶ್ರೀರಾಮಚಂದ್ರ ಯಾರದೋ ಜನಸಾಮಾನ್ಯರ ಮಾತನ್ನು ಕೇಳಿ, ಸೀತೆಯನ್ನು ತ್ಯಜಿಸಿದ್ದು ತಪ್ಪು ಎಂಬ ವಿಚಾರವನ್ನು ಸಾಹಿತ್ಯದ ಮುಖಾಂತರ ಪ್ರಕಟಿಸಿದ್ದಾರೆ. ಆದರೆ ಅದೇ ಭೈರಪ್ಪನವರು 94ನೇ ವಯಸ್ಸಿನಲ್ಲಿ ಸರಸ್ವತಮ್ಮನವರನ್ನು ಬಿಟ್ಟು ಹೋಗಿ, ಬದುಕಿನ ಕೊನೆ ದಿನಗಳಲ್ಲಿ ಕುಟುಂಬದವರಿಂದ ದೂರ ಇದ್ದು, ವಿಧಿವಶರಾಗಿದ್ದು ಅವರ ಈಗಿನ ಸ್ಥಿತಿಯನ್ನು ಮತ್ತು ಅವರ ಕಥಾಲೇಖನದ ಸನ್ನಿವೇಶದ ಮನಸ್ಥಿತಿಗಿರುವಂತಹ ವ್ಯತ್ಯಾಸವನ್ನು ಸ್ಪಷ್ಟವಾಗಿ ಸಮಾಜಕ್ಕೆ ಅರ್ಥ ಮಾಡ್ಕೊಳ್ಳೋಕೆ ಸಾಧ್ಯವಾಗುತ್ತದೆ.
ಇಷ್ಟೇ ಆಗಿದ್ರೆ ಸಮಾಜ ಬೇರೆ ಯೋಚನೆ ಮಾಡುತಿತ್ತು. ಆದರೆ ಭೈರಪ್ಪನವರು ಸುದೀರ್ಘ ವರ್ಷಗಳ ಸಾಹಿತ್ಯದಿಂದ ಗಳಿಸಿದ್ದ ಹಲವು ಕೋಟಿ ಹಣವನ್ನು ಕುಟುಂಬದವರನ್ನು ಹೊರತುಪಡಿಸಿ ಬೇರೆ ಬೇರೆ ವ್ಯಕ್ತಿಗಳು ಕೊನೆ ದಿನಗಳಲ್ಲಿ ಟ್ರಸ್ಟ್ ಮಾಡಿಕೊಂಡು ಹಾಗೂ ಕೊನೆದಿನಗಳಲ್ಲಿ ವಿಲ್ ಮಾಡ್ಕೊಂಡು ಅದನ್ನು ವಿನಿಯೋಗಿಸುವುದಕ್ಕೆ ಹೊರಟಿರುವುದು ಈ ಸಮಾಜಕ್ಕೆ ಕೊಟ್ಟಂತಹ ದೊಡ್ಡ ತಪ್ಪು ಸಂದೇಶ. ಶ್ರೀ ಭೈರಪ್ಪನವರಿಗೆ ಕೊನೆಯ ದಿನಗಳಲ್ಲಿ ಒಂದಷ್ಟು ಅಪ್ಯಾಯಮಾನವಾಗಿ ನೋಡಿಕೊಂಡು, ಸಾಹಿತ್ಯ ಕ್ಷೇತ್ರದಲ್ಲೂ ಒಂದಷ್ಟು ಅವರ ಮಾರ್ಗದರ್ಶನ ಪಡೆಯುವ ರೀತಿ ವರ್ತನೆ ಮಾಡಿದಂತವರು ಎಲ್ಲರೂ ಸೇರಿ ಈ ರೀತಿ ಆದಂತಹ ಪ್ರಕರಣ ಆಗಿರುವುದು ಸಾವಿರ ಪ್ರಶ್ನೆಗಳನ್ನು ಸಮಾಜದಲ್ಲಿ ಹುಟ್ಟ ಹಾಕಿದೆ.
ನನ್ನ ಮನಸ್ಸಿನಲ್ಲಿ ನಮ್ಮ ಹಿರಿಯರ ಮಾತು ನೆನಪಾಗುತ್ತಿತ್ತು, “ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದ” ಎಂಬ ನಾಣ್ಣುಡಿ ಇದೆ. ಆ ನಾಣ್ಣುಡಿಯಂತೆ ಆ ಟ್ರಸ್ಟ್ ಮತ್ತು ಆ ಟ್ರಸ್ಟ್ ನಲ್ಲಿ ಇರುವಂತಹ ಟ್ರಸ್ಟಿಗಳನ್ನು ಸಮಾಜ ಆ ದೃಷ್ಠಿಯಲ್ಲಿ ನೋಡುವುದು ನಿಸ್ಸಂದೇಹವಾಗಿದೆ. ನಿಜವಾಗಿ ಶ್ರೀ ಭೈರಪ್ಪನವರ ಉದ್ದೇಶವನ್ನು ಸಮಾಜದಲ್ಲಿ ಮುಂದುವರಿಸುವ ಚಿಂತನೆ ಇದ್ದಲ್ಲಿ, ಭೈರಪ್ಪನವರ ದೀರ್ಘಕಾಲಿಕ ಸ್ನೇಹಿತರಾದಂತಹ ಪ್ರಧಾನ ಗುರುದತ್, ಜಿ.ಎಲ್. ಶೇಖರ್ ಹಾಗೂ ಕೆಲವರನ್ನಾದರೂ ಜೊತೆಯಲ್ಲಿ ಇಟ್ಟುಕೊಂಡು, ಅವರೊಂದಿಗೆ ಹೊಸಬರನ್ನು ಸೇರಿಸಿಕೊಂಡಿದ್ರೆ ಆ ಟ್ರಸ್ಟ್ ಬಗ್ಗೆ, ಆ ವಿಲ್ ಬಗ್ಗೆ ಅಭಿಪ್ರಾಯ ಬೇರೆ ಇರ್ತಿತ್ತು. ಆದರೆ ಪ್ರಸ್ತುತ ಈ ವಿಲ್ ಮತ್ತು ಈ ಟ್ರಸ್ಟ್ ಕೆಲವರ ಸ್ವಾರ್ಥ ಮತ್ತು ದುರುದ್ದೇಶಗಳಿಂದ ಕೂಡಿರಬಹುದು ಎಂಬ ಭಾವನೆ ಸಮಾಜದಲ್ಲಿ ಮೂಡಿರುವುದು ನೂರಕ್ಕೆ ನೂರರಷ್ಟು ಸತ್ಯ. ಇದನ್ನ ಯಾವುದೇ ಸಮಜಾಯಿಷಿ ಮುಖಾಂತರ ಇವರು ಸಮಾಜಕ್ಕೆ ಸಮರ್ಪಕ ಉತ್ತರ ನೀಡಲಾರರು ಅಂತ ನನಗೆ ಅನ್ನಿಸುತ್ತದೆ. ಈ ಟ್ರಸ್ಟ್ ನಲ್ಲಿ ಇರುವಂತವರು ಗಣ್ಯ ವ್ಯಕ್ತಿಗಳೇ, ಇವರುಗಳಿಗೆ ಅವಶ್ಯಕತೆ ಇತ್ತ? ಇದೆಲ್ಲವನ್ನೂ ಗಮನಿಸಿದಾಗ ಒಂದೊಂದು ಸಾರಿ ದೊಡ್ಡವರ ಸಣ್ಣತನವೂ ಕೂಡ ಆಗಾಗ ಪ್ರಕಟ ಆಗುತ್ತದೆ ಎಂದು ನನಗೆ ಅನ್ನಿಸುತ್ತದೆ. ಒಂದಂತೂ ಸತ್ಯ, ಈ ಕೊನೆ ದಿನಗಳ ನಡೆ ಸಮಾಜಕ್ಕೆ ಒಳ್ಳೆಯ ಸಂದೇಶವಾಗಿಲ್ಲ. ಆದರೆ ಭೈರಪ್ಪನವರು ಒಬ್ಬರು ಅತ್ಯಂತ ಶ್ರೇಷ್ಠ ಸಾಹಿತಿ ಎನ್ನುವುದರಲ್ಲಿ ಯಾವುದೇ ಪ್ರಶ್ನೆ ಇಲ್ಲ, ಸಾಹಿತ್ಯ ಕ್ಷೇತ್ರದ ದಿಗ್ಗಜರ ಕೊನೆ ದಿನಗಳು ಈ ರೀತಿ ಇದದ್ದು ಇತಿಹಾಸದಲ್ಲಿ ಸರ್ವ ಸ್ಥಾಪಿತವಾದ ಒಂದು ವಿಚಾರವಾಗಿ ಉಳಿದುಕೊಳ್ಳುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ.
ಒಂದು ವೇದಿಕೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ರವರು ಮಾತನಾಡುತ್ತಾ ಹೇಳ್ತಾರೆ ಅವರ ಹೆಂಡತಿ ಸೌಮ್ಯ ರವರ ಬಗ್ಗೆ ಒಂದು ಒಳ್ಳೆಯ ಮಾತನ್ನು ಹೇಳ್ತಾರೆ, ಅದೆನೆಂದರೆ ಗಂಡನನ್ನು ಸಹಿಸಿಕೊಳ್ಳುವುದು ಹೆಂಡತಿಗೆ ಎಷ್ಟು ಕಷ್ಟ, ಅದರಲ್ಲೂ ಪತ್ರಕರ್ತ ಗಂಡನನ್ನೂ ಸಹಿಸಿಕೊಳ್ಳುವುದು ಇನ್ನೂ ಕಷ್ಟ ಎಂದು ಹೇಳ್ತಾರೆ. ಅದೇ ರೀತಿ ಒಬ್ಬ ಸಾಹಿತಿ ಗಂಡನನ್ನೂ ಸಹಿಸಿಕೊಳ್ಳುವುದು ಇನ್ನೂ ಕಷ್ಟ ಎಂಬ ಮಾತು ಶ್ರೀ ಭೈರಪ್ಪನವರಿಗೆ ಏಕೆ ಮರೆತುಹೋಯ್ತೋ ಅಥವಾ ವಿಶ್ವೇಶ್ವರ ಭಟ್ ರು ಏಕೆ ನೆನಪು ಮಾಡ್ಲಿಲವೋ ನನಗೆ ಅರ್ಥ ಆಗ್ತಿಲ್ಲ.
ಈ ಟ್ರಸ್ಟ್ ಅನ್ನು ಸದುದ್ದೇಶದಿಂದ ಮಾಡಿದ್ದಾರೆ, ಆ ಟ್ರಸ್ಟ್ ಪ್ರತಿ ಪೈಸವನ್ನು ಬೈರಪ್ಪನವರ ಧೇಯೋದ್ದೇಶಗಳಿಗೆ ಉಪಯೋಗಿಸುತ್ತಾರೆ ಎಂದು ಹಲವಾರು ಯ್ಯೂಟ್ಯೂಬ್ ಚಾಲನ್ ಗಳಲ್ಲಿ ಮಾತನಾಡುತ್ತಿದ್ದಾರೆ. ಅದು ಆಗಲೇ ಬೇಕು. ಆದರೆ ಸಮಾಜ ಎದುರು ನೋಡುತ್ತಿದೆ ಈ ಟ್ರಸ್ಟಿಗಳು ಸಹ ತಾವು ಸಂಪಾದನೆ ಮಾಡಿದ ಆಸ್ತಿಯನ್ನು ತಮ್ಮ ಸ್ವಂತ ಕುಟುಂಬದವರನ್ನು ಹೊರತುಪಡಿಸಿ ಸಮಾಜದ ಸದುದ್ದೇಶಕ್ಕೆ ದಾನ ಮಾಡುತ್ತಾರಾ ? ಎಂಬ ಲಕ್ಷ ಡಾಲರ್ ಪ್ರಶ್ನೆಯನ್ನು ಸಮಾಜ ನೋಡುತ್ತಿದೆ. ಈ ಮಾತನ್ನು ಮುಗಿಸುವ ಮೊದಲು, ಭೈರಪ್ಪನವರ ಪಾರ್ಥಿವ ಶರೀರವನ್ನು ಅವರ ಸ್ವಗೃಹದಿಂದ ಅಂಬುಲೆನ್ಸ್ ನಲ್ಲಿ ಇಡಲಾಗಿತ್ತು. ಆ ಸಂದರ್ಭದಲ್ಲಿ ರವಿಶಂಕರ್ ರವರು ಅದೇ ಅಂಬುಲೆನ್ಸ್ ನಲ್ಲಿ ಇದ್ದರು, ವಿಶ್ವೇಶ್ವರ ಭಟ್ ರವರು ಕೂಡ ಅದೇ ಅಂಬುಲೆನ್ಸ್ ನಲ್ಲಿದ್ದರು, ಅವರ ಪಕ್ಕ ನಾನು ಕುಳಿತ್ತಿದ್ದೆ, ಅಂಬುಲೆನ್ಸ್ ಸ್ಮಶಾನದ ಕಡೆ ಹೊರಟಿತ್ತು. ರವಿಶಂಕರ್ ಆ ಮನೆಯನ್ನು ಹೇಗೆ ಕಟ್ಟಿದರು ಎಂಬ ವಿಚಾರವನ್ನು ಹೇಳಿದರು, ಆ ಮನೆಯನ್ನು 1983 ರಲ್ಲಿ ಕಟ್ಟಲಾಯಿತು. ಸರಸ್ವತಮ್ಮನ ಅಕ್ಕ-ತಂಗಿಯರು ಇಬ್ಬರೂ ಸಹ ಆಗಲೇ ಮನೆಯನ್ನು ಕಟ್ಟಿದ್ದರು ಎಂಬ ಕಾರಣಕ್ಕೆ ಸರಸ್ವತಮ್ಮನಿಗೆ ಅವರ ತಂದೆ ಮನೆಯನ್ನು ಕಟ್ಟಲು ಒತ್ತಾಯ ಮಾಡುತ್ತಿದ್ದರಂತೆ. ಆದರೆ ಭೈರಪ್ಪ ನವರ ಬಳಿ ಮನೆ ಕಟ್ಟಲು ಬೇಕಾದ ಪೂರ್ತಿ ಹಣ ಇರಲಿಲ್ಲ, ಆದ್ದರಿಂದ ಸರಸ್ವತಮ್ಮನವರ ತಂದೆ ಕೂಡ ಮನೆ ಕಟ್ಟಲು ಸ್ವಲ್ಪ ಸಹಾಯವನ್ನು ಮಾಡಿದರು. ಆ ಸಂದರ್ಭದಲ್ಲಿ ಸಿಮೆಂಟ್ ಗೆ ತುಂಬಾ ಕೊರತೆ ಇತ್ತು, ವಿಶೇಷ ಅನುಮತಿ ಪಡೆದು ಸಿಮೆಂಟ್ ಅನ್ನು ಕೊಂಡು ಈ ಮನೆಯನ್ನು ಕಟ್ಟಲಾಗಿದೆ ಎಂಬುದು ರವಿಶಂಕರ್ ರವರ ಮಾತಾಗಿತ್ತು. ಅದಾಗಲೇ ವ್ಯವಹಾರ ಕ್ಷೇತ್ರದಲ್ಲಿ ಮನೆ ಕಟ್ಟಿಕೊಡುವ ಉದ್ದಿಮೆಯನ್ನು ಮಾಡುತ್ತಿದ್ದ ರವಿಶಂಕರ್ ರವರು ತಾವು ಗಳಿಸಿದ ಹಣದಲ್ಲೂ ಸಹ ಒಂದಷ್ಟು ಹಣ ಹಾಕಿ ಈ ಮನೆಯನ್ನು ಪೂರ್ಣಗೊಳಿಸಿದ್ದೇವೆ ಎಂಬ ಮಾತನ್ನು ವಿಶ್ವೇಶ್ವರ ಭಟ್ ರವರಿಗೆ ಹೇಳುತ್ತಿದ್ದರು. ಈ ಮಾತು ಕೇಳಿದ ನನಗೆ ಅನಿಸುತ್ತಿತ್ತು, ಯಾವುದೇ ಸ್ವಯಾರ್ಜಿತ ಆಸ್ತಿಯಲ್ಲೂ ಕೂಡ ಕುಟುಂಬದ ಒಬ್ಬರಲ್ಲ ಒಬ್ಬರ ಶ್ರಮ ಮತ್ತು ಹಣ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಕೊಂಡಿರುತ್ತದೆ. ಎಲ್ಲಾ ಕುಟುಂಬದಲ್ಲೂ ಕೂಡ ಇದು ಸಹಜವಾಗಿರುವಂತದ್ದೇ, ಅದಕ್ಕೆ ಅದನ್ನು ಹಿಂದೂ ಅವಿಭಕ್ತ ಕುಟುಂಬದ ಆಸ್ತಿ ಎಂದು ಕೂಡ ಹೇಳುತ್ತಾರೆ. ಅದನ್ನು ರವಿಶಂಕರ್ ರವರು ವಿಶ್ವೇಶ್ವರ ಭಟ್ ರವರಿಗೆ ಸೂಚ್ಯವಾಗಿ ತಿಳಿಸಿದ್ದರೇನೋ ಎಂದು ನನಗೆ ಅನಿಸಿತು.
- ಎಚ್.ವಿ.ರಾಜೀವ್, ಕಾರ್ಯದರ್ಶಿ, ಪ್ರಮತಿ ಶಿಕ್ಷಣ ಸಂಸ್ಥೆ, ಮೈಸೂರು