ಅ.12 ರಂದು ಬಲಿಜ (ಬಣಜಿಗ) ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ವಧು-ವರರ ಸಮಾವೇಶ

ಮೈಸೂರು,ಅಕ್ಟೋಬರ್,4,2025 (www.justkannada.in): ಅಕ್ಟೋಬರ್ 12 ರಭಾನುವಾರ ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಯೋಗೀನಾರೇಯಣ ಬಣಜಿಗ/ಬಲಿಜ  ಸಂಘದ ವತಿಯಿಂದ  ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಧು-ವರರ ಸಮಾವೇಶ ಏರ್ಪಡಿಸಲಾಗಿದೆ ಎಂದು  ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಆರ್. ಗೋಪಾಲಕೃಷ್ಣ ತಿಳಿಸಿದರು.

ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಪ್ರಧಾನ ಕಾರ್ಯದರ್ಶಿ ಹೆಚ್. ಆರ್. ಗೋಪಾಲಕೃಷ್ಣ, ಈ ಸಂಘವು 1958ರಲ್ಲಿ  ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ  ಸಮಾಜದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗಿದೆ.  ಇಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶಗಳಲ್ಲಿಯೂ ನೆಲೆಸಿದ್ದಾರೆ. ಸರ್ಕಾರದ ವಿವಿಧ ಹಂತಗಳಲ್ಲಿ ನೌಕರಿ ಪಡೆದಿದ್ದಾರೆ.    ಹಲವಾರು ಅಭಿವೃದ್ಧಿ ಕಾರ್ಯಗಳ ಜೊತೆಗೆ ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪೋತ್ಸಾಹಿಸುವ ಸಲುವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅದರಂತೆ ಈ ವರ್ಷವೂ ಕೂಡ ಶೇ. 85 ಕ್ಕಿಂತ ಹೆಚ್ಚು ಅಂಕ ಪಡೆದಿರುವ ಎಸ್. ಎಸ್. ಎಲ್. ಸಿ ಹಾಗೂ ಪಿ. ಯು. ಸಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ನಮ್ಮ ಸಂಘದಲ್ಲಿ ಡಾ. ಎಂ.ಎಸ್ ರಾಮಯ್ಯ ಮಹಿಳಾ ವಿದ್ಯಾರ್ಥಿನಿಯರ ವಸತಿ ನಿಲಯವನ್ನು  ಮಾಜಿ ಸಚಿವರಾದ ಡಾ.ಎಂ. ಆರ್. ಸೀತಾರಾಮ್ ಅವರ ಸಹಕಾರದಿಂದ 2020ರಲ್ಲಿ ಕಟ್ಟಡವನ್ನು ನವೀಕರಣಗೊಳಿಸಿ 35 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಲಾಗುವುದು ಎಂದು ತಿಳಿಸಿದರು.

ವಧು -ವರರ ನೊಂದಣಿಗೆ ಮನವಿ

ಅದೇ ದಿನ ಸಮುದಾಯದ ವಧು-ವರರಿಗೆ ಅನುಕೂಲವಾಗಲೆಂದು ಸಮಾವೇಶ ಮಾಡುತ್ತಿದ್ದು ಈಗಾಗಲೇ ರಾಜ್ಯದ ವಿವಿಧ  ಜಿಲ್ಲೆಗಳಿಂದ ನೋಂದಣಿಗೆ ಹೆಸರುಗಳನ್ನು ನೋಂದಾಯಿಸಲಾಗಿದೆ. ಅಂತಿಮವಾಗಿ  ನೋಂದಣಿ ಮಾಡಿಸದ ವಧು ವರರು ಆಗಸ್ಟ್ 10ನೇ ದಿನಾಂಕದೊಳಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ಕೋರುತ್ತೇವೆ.

ಈ ಕಾರ್ಯಕ್ರಮವನ್ನು ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರು ಹಾಗೂ ಡಾ.ಎಂ. ಎಸ್. ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಆರ್. ಸೀತಾರಾಮ್ ಉದ್ಘಾಟಿಸಲಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷರಾದ  ಎಂ. ನಾರಾಯಣ ಅವರು ಅಧ್ಯಕ್ಷತೆ ವಹಿಸಲಿದ್ದು , ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಮಾಜಿ ಅಧ್ಯಕ್ಷ ಹೆಚ್. ಎ. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಂಡ್ಯ ಸರ್ವ ಬಣಜಿಗ/ಬಲಿಜ ಸಂಘದ ಅಧ್ಯಕ್ಷ ಕೆ. ಎನ್. ಮೋಹನ್ ಕುಮಾರ್ ಹಾಗೂ ಚಾಮರಾಜನಗರ ಜಿಲ್ಲಾ ದಾಸ ಬಣಜಿಗರ ಸಂಘದ ಅಧ್ಯಕ್ಷರಾದ  ಸಿ. ಚಂದ್ರಶೇಖರ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಹೆಚ್. ಆರ್. ಗೋಪಾಲಕೃಷ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ  ಖಜಾಚಿ ಕೆ. ಚಂದ್ರಶೇಖರ್, ನಿರ್ದೇಶಕರಾದ ಬಿ. ಕೆ. ಸುರೇಶ, ಹೆಚ್. ವಿ. ನಾಗರಾಜ ಉಪಸ್ಥಿತರಿದ್ದರು.

Key words: Mysore Balija, students, award ceremony, October 12