ಮೈಸೂರು,ಸೆಪ್ಟಂಬರ್,30,2025 (www.justkannada.in): ನಾಳೆಯಿಂದ ಸಿಎಂ ಸಿದ್ದರಾಮಯ್ಯ ಎರಡು ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು ಅಕ್ಟೋಬರ್ 2 ರಂದು ದಸರಾ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ನಾಳೆ ಬೆಂಗಳೂರಿನಿಂದ ಮೈಸೂರಿಗೆ ಮಧ್ಯಾಹ್ನ 3.25ಕ್ಕೆ ವಿಶೇಷ ವಿಮಾನದ ಮೂಲಕ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಅಕ್ಟೋಬರ್ 2 ಗುರವಾರದಂದು ಬೆಳಿಗ್ಗೆ 8.30ಕ್ಕೆ ಮೈಸೂರಿನ ಗಾಂಧಿ ಸ್ಕ್ವೇರ್ ಬಳಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಗೌರವ ಸಮರ್ಪಣೆ ಮಾಡಲಿದ್ದಾರೆ.
ನಂತರ ಬೆಳಿಗ್ಗೆ 9 ರಿಂದ 10 ಗಂಟೆ ವೇಳೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೀರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 1 ಗಂಟೆಗೆ ಮೈಸೂರು ದಸರಾ ಅಂಗವಾಗಿ ಅರಮನೆಯ ಆವರಣದ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ನೆರವೇರಿಸಲಿದ್ದಾರೆ.
ಇದಾದ ನಂತರ ಸಿಎಂ ಸಿದ್ದರಾಮಯ್ಯ ಸಂಜೆ 4.42 ರಿಂದ 5.06ರ ವೇಳೆಗೆ ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ವಿಜಯದಶಮಿ ಜಂಬೂಸವಾರಿ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ. ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು ಅಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಿ ಅಕ್ಟೋಬರ್ 3 ಶುಕ್ರವಾರ ಬೆಂಗಳೂರಿಗೆ ತೆರಳಲಿದ್ದಾರೆ.
Key words: Mysore Dasara, Jumbo Savari , October 2, CM Siddaramaiah