Monday, August 17, 2026

BDA Apartments

Home Crime ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ವಂಚನೆ: ಇಬ್ಬರ ಬಂಧನ

ಪ್ರಸಿದ್ಧ ದೇಗುಲಗಳ ಹೆಸರಿನಲ್ಲಿ ನಕಲಿ ವೆಬ್​ಸೈಟ್ ತೆರೆದು ವಂಚನೆ: ಇಬ್ಬರ ಬಂಧನ

ಚಿಕ್ಕಮಗಳೂರು, ಸೆಪ್ಟೆಂಬರ್, 30,2025 (www.justkannada.in): ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಆರೋಪದ ಮೇಲೆ ತೆಲಂಗಾಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣ  ಮೂಲದ ಸುದೀಪ್ ಹಾಗೂ ಅನಿಲ್ ಕುಮಾರ್  ಬಂಧಿತ ಆರೋಪಿಗಳು. ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದೆ. ಬಂಧಿತ ಇಬ್ಬರು ಶೃಂಗೇರಿ, ಹೊರನಾಡು ಅನ್ನಪೂರ್ಣೇಶ್ವರಿ ಸೇರಿದಂತೆ ಕರ್ನಾಟಕದ ಪ್ರತಿಷ್ಠಿತ ದೇವಾಲಯಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ತೆರೆದು ಭಕ್ತರಿಂದ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದರು ಎನ್ನಲಾಗಿದೆ.

ಆರೋಪಿಗಳು Www.Devaseva.com ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ತೆರೆದಿದ್ದು, ಅದರ ಮೂಲಕ ದೇಶದ ಮತ್ತು ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಹೆಸರು ಬಳಸಿ ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ಹಣ ಪಡೆದು ಭಕ್ತರನ್ನು ವಂಚಿಸುತ್ತಿದ್ದರು.

ವಿಶೇಷ ಪೂಜೆ, ಪ್ರಸಾದ, ಸೇವೆಗಳ ಹೆಸರಿನಲ್ಲಿ ವಂಚನೆ ನಡೆಯುತ್ತಿರುವ ಬಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ದೇವಾಲಯದ ಉಪವ್ಯವಸ್ಥಾಪಕ ರಾಘವೇಂದ್ರ ಅವರು ಕಳಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಪ್ರಕರಣ ಸಂಬಂಧ ತನಿಖೆ ಮುಂದುವರೆಸಿದ್ದು, ವಂಚನೆಗೆ ಒಳಗಾದ ಭಕ್ತರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Key words: Two, arrested, , fake websites, temples, fraud