ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಜೆಪಿ ನಾಯಕರ ಭೇಟಿ, ಪರಿಶೀಲನೆ

ಬೀದರ್‌,ಸೆಪ್ಟಂಬರ್,29,2025 (www.justkannada.in):  ಭಾರಿ ಮಳೆಯಿಂದಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಇಂದು ಬೀದರ್‌ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೀದರ್‌ ತಾಲ್ಲೂಕಿನ ಪಾನ್‌ ಕಾಶೆಂಪುರ್‌ ಗ್ರಾಮಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು, ಇತ್ತೀಚೆಗೆ ಸಾಲದ ಹೊರೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ರೈತ ಮಹಿಳೆ ಗಂಗಮ್ಮ ಮಚಕೂರೆ ಎಂಬುವರ ಮನೆಗೆ ತೆರಳಿ ವೈಯಕ್ತಿಕ ನೆರವು ನೀಡಿದರು. ಬಳಿಕ ಬೀದರ್‌ ತಾಲ್ಲೂಕಿನ ಬರೀದಾಬಾದ್‌, ಬುಧೇರಾ ಹಾಗೂ ಇಸ್ಲಾಂಪುರ ಗ್ರಾಮದಲ್ಲಿ ಭಾರಿ ಮಳೆಗೆ ಬೆಳೆ ಹಾನಿಯಾದ ರೈತರ ಜಮೀನುಗಳನ್ನು ವೀಕ್ಷಿಸಿ, ರೈತರಿಗೆ ಸಾಂತ್ವನ ಹೇಳಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ರಾಜಕೀಯ ಮಾಡಲು ನಾವು ಇಲ್ಲಿಗೆ ಬಂದಿಲ್ಲ. ಸಂಕಷ್ಟದಲ್ಲಿರುವ ರೈತರ ಜೊತೆ ಇರಬೇಕು. ಸಂಕಷ್ಟಕ್ಕೆ ಸ್ಪಂದಿಸಬೇಕು. ರಾಜ್ಯ ಸರ್ಕಾರವನ್ನು ಎಚ್ಚರಿಸಲು ಬಂದಿದ್ದೇವೆ. ಎರಡು ದಿನ ಬೀದರ್‌, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ರೈತರ ಸಂಕಷ್ಟ ಅರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಎನ್‌ಡಿಆರ್‌ಎಫ್‌ ಪರಿಹಾರ ಎಷ್ಟು ಬರಬೇಕೋ ಅಷ್ಟು ಬಂದೇ ಬರುತ್ತದೆ. ರಾಜ್ಯ ಸರ್ಕಾರ ಕೂಡ ಮುಂದೆ ಬಂದು ಪರಿಹಾರ ವಿತರಿಸಬೇಕು. ಅಧಿಕಾರಿಗಳನ್ನು ಬಂದು ಭೇಟಿ ಮಾಡಿ ಹೋಗುವುದರಲ್ಲಿ ಅರ್ಥವಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಸ್ಪಂದಿಸುವ ಕೆಲಸವಾಗಬೇಕು. ಸರ್ಕಾರ ಆ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

Key words: BJP leaders, visit flood-affected areas, inspect