ಭಾರೀ ಮಳೆಗೆ ಬೆಳೆ ಹಾನಿ: ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ- ಕೇಂದ್ರ ಸಚಿವ ಹೆಚ್‌ ಡಿಕೆ ಒತ್ತಾಯ

ಬೆಂಗಳೂರು, ಸೆಪ್ಟೆಂಬರ್‌, 29,2025 (www.justkannada.in):  ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾಗಿ ಸಾಕಷ್ಟು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ತಕ್ಷಣವೇ ಸಂಕಷ್ಟಕ್ಕೀಡಾಗಿರುವ ಜನರ ನೆರವಿಗೆ ತಕ್ಷಣವೇ ಧಾವಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕಲ್ಯಾಣ ಕರ್ನಾಟಕದ ಕಲಬುರಗಿ, ವಿಜಯಪುರ, ಬೀದರ್, ರಾಯಚೂರು ಮತ್ತು ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಉಂಟಾಗಿ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕ್ಷೇಮಕ್ಕಾಗಿ ನಾನು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಈ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರ ಜೀವ ರಕ್ಷಣೆ, ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸುವುದು ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಎಂದಿದ್ದಾರೆ.

ಜನರ ಪ್ರಾಣ ನಷ್ಟದ ಜೊತೆಗೆ ಈ ಜಿಲ್ಲೆಗಳಲ್ಲಿ ತೀವ್ರ ಬೆಳೆನಷ್ಟ ಮತ್ತು ಹಾನಿ ಸಂಭವಿಸಿದೆ. ರೈತರ ಸ್ಥಿತಿ ಹೃದಯವಿದ್ರಾವಕವಾಗಿದ್ದು, ಅವರಿಗೆ ಸೂಕ್ತ-ಸಕಾಲಿಕ ಪರಿಹಾರ ಒದಗಿಸಬೇಕು. ಇದರಿಂದ ಅವರು ತಮ್ಮ ಜೀವನೋಪಾಯವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೆಚ್ ಡಿಕೆ ತಿಳಿಸಿದ್ದಾರೆ.

ನೆರೆ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಪರಿಹಾರ ಕ್ರಮಗಳ ತ್ವರಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ನಾನು ಖುದ್ದಾಗಿ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್ ಮತ್ತು ರಾಯಚೂರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಪರಿಹಾರ ಕಾರ್ಯ, ಆಗಿರುವ ನಷ್ಟದ ಬಗ್ಗೆ ಮಾಹಿತಿ ಪಡೆದು ತುರ್ತು ಕ್ರಮ ವಹಿಸುವಂತೆ ಸೂಚಿಸಿದ್ದೇನೆ ಎಂದು ಹೆಚ್ ಡಿಕೆ ತಿಳಿಸಿದ್ದಾರೆ.

Key words: Heavy rains, damage crops, Union Minister, HDK , farmers