ದಸರಾ “ಡ್ರೋನ್ ಶೋ”: ಅನಧಿಕೃತ ಡ್ರೋನ್ ವಿಡಿಯೋ ಚಿತ್ರೀಕರಣದ ವಿರುದ್ದ ಕಠಿಣ ಕ್ರಮ- ಸೆಸ್ಕ್ ಎಚ್ಚರಿಕೆ

ಮೈಸೂರು, ಸೆಪ್ಟಂಬರ್,26, 2025 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅತಿದೊಡ್ಡ ಡ್ರೋನ್ ಪ್ರದರ್ಶನ ನಡೆಸಲಾಗುತ್ತಿದ್ದು, ಸೆ.28, 29 ಹಾಗೂ ಅ.1 ಮತ್ತು 2ರಂದು ಅಭೂತಪೂರ್ವ ಪ್ರದರ್ಶನ ನಡೆಯಲಿದೆ.

ಆದರೆ ಡ್ರೋನ್ ಪ್ರದರ್ಶನ ನಡೆಯುವ ವೇಳೆ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಮ್ಮ ಡ್ರೋನ್‌ ಗಳನ್ನು ಹಾರಿಸಿ ಸೆಸ್ಕ್‌ ವತಿಯಿಂದ ನಡೆಸಲಾಗುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಸೆರೆಹಿಡಿಯುವುದು ಹಾಗೂ ಡ್ರೋನ್‌ ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಕ್ಕೆ ನಿರ್ಬಂಧ ಹೇರಲಾಗಿದೆ.

ಈ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಡ್ರೋನ್‌ ಗಳನ್ನು ಹಾರಿಸಿ, ಸೆಸ್ಕ್ ವತಿಯಿಂದ ದಿನಾಂಕ: 28-09-2025, 29-09-2025 ಹಾಗೂ 01-10-2025, 02-10-2025ರಂದು ನಡೆಸಲಾಗುವ ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಡ್ರೋನ್‌ ಗಳ ಮೂಲಕ ಚಿತ್ರೀಕರಿಸಿ, ಡ್ರೋನ್‌ ಶೋ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದು ಕಂಡುಬಂದಲ್ಲಿ ಅವರುಗಳ ವಿರುದ್ಧ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮಕೈಗೊಳ್ಳಲು ಸೆಸ್ಕ್ ‌ನಿರ್ಧರಿಸಿದೆ.

ಆದ್ದರಿಂದ ಯಾವುದೇ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸೆಸ್ಕ್ ವತಿಯಿಂದ ನಡೆಸಲಾಗುತ್ತಿರುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಡ್ರೋನ್‌ ಗಳ ಮೂಲಕ ಅನಧಿಕೃತವಾಗಿ ಚಿತ್ರೀಕರಣ ಮಾಡದಂತೆ ಈ ಮೂಲಕ ಎಚ್ಚರಿಸಲಾಗಿದೆ. ಸೆಸ್ಕ್‌ ವತಿಯಿಂದ ನೀಡಲಾಗಿರುವ ಎಚ್ಚರಿಕೆ ನಡುವೆಯೂ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳು ಖಾಸಗಿಯಾಗಿ ಡ್ರೋನ್‌ ಪ್ರದರ್ಶನದ ದೃಶ್ಯಗಳನ್ನು ಚಿತ್ರೀಕರಿಸುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿ ಮತ್ತು ಸಂಸ್ಥೆಗಳ ಡ್ರೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕವೂ ಕ್ರಮವಹಿಸಲಾವುದು ಎಂದು ಸೆಸ್ಕ್‌ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

Key words: Dasara Drone Show, Strict action, unauthorized, drone video, shooting