ಬೈಕ್​ ಟ್ಯಾಕ್ಸಿ ನಿರ್ಬಂಧ: ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಹೈಕೋರ್ಟ್​

ಬೆಂಗಳೂರು, ಸೆಪ್ಟೆಂಬರ್​ 25,2025 (www.justkannada.in): ಬೈಕ್​ ಟ್ಯಾಕ್ಸಿ ನಿರ್ಬಂಧ ವಿಚಾರವಾಗಿ ನೀತಿ ಚೌಕಟ್ಟು ನಿಗದಿಪಡಿಸಲು ಒಂದು ತಿಂಗಳು ಸಮಯ ನೀಡಿದ್ದರೂ ಸರ್ಕಾರ ಈವರೆಗೆ ನೀತಿ ರೂಪಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಬೈಕ್​ ಟ್ಯಾಕ್ಸಿ ನಿರ್ಬಂಧ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ಬೈಕ್​ ಟ್ಯಾಕ್ಸಿ ನಿರ್ಬಂಧ ವಿಚಾರವಾಗಿ ನೀತಿ ಚೌಕಟ್ಟು  ರೂಪಿಸಲು ಒಂದು ತಿಂಗಳು ಸಮಯ ನೀಡಲಾಗಿತ್ತು.  ಆದರೆ  ಸರ್ಕಾರ ಈವರೆಗೆ ನೀತಿ ರೂಪಿಸಿಲ್ಲ. ಹೀಗಾಗಿ ಸರ್ಕಾರದ ನಿರ್ಬಂಧಕ್ಕೆ ತಡೆ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿತು.

ಬೈಕ್ ಟ್ಯಾಕ್ಸಿ ಬಗ್ಗೆ ನಿಮ್ಮ ವಾದ ಮಂಡಿಸಿ. ಆ ಬಳಿಕ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿ ಮುಂದಿನ​ ವಿಚಾರಣೆಯನ್ನ ಅಕ್ಟೋಬರ್​ 15ಕ್ಕೆ ಹೈಕೋರ್ಟ್  ನಿಗದಿಪಡಿಸಿದೆ.

ಪ್ರಯಾಣಿಕರನ್ನು ಕರೆದೊಯ್ಯುವ ಬೈಕ್​ ಟ್ಯಾಕ್ಸಿಗೆ ಸರ್ಕಾರ ಅನುಮತಿ ನೀಡಿಲ್ಲ. ಬೈಕ್ ಗಳನ್ನು ಡೆಲಿವರಿಗಾಗಿ ಬಳಸಲು ಮಾತ್ರ ಅವಕಾಶ ನೀಡಲಾಗಿದ್ದು, ಆ ಬಗ್ಗೆ ನೀತಿ ರೂಪಿಸಿದ್ದೇವೆ. ಆದರೆ ಬೈಕ್ ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಅವಕಾಶ ನೀಡಿಲ್ಲ. ಅನುಮತಿಯಿಲ್ಲದಿದ್ದರೂ ಬೈಕ್ ಟ್ಯಾಕ್ಸಿಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಬೈಕ್ ಟ್ಯಾಕ್ಸಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್​ ಗೆ ರಾಜ್ಯ ಸರ್ಕಾರದ ಪರ ವಕೀಲ ಎ.ಜಿ. ಶಶಿಕಿರಣ್ ಶೆಟ್ಟಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೋರ್ಟ್​, ಬೈಕ್ ಟ್ಯಾಕ್ಸಿ ಬದಲು ಗಿಗ್ ಕಾರ್ಮಿಕರ ಬಗ್ಗೆ ಹೇಳುತ್ತಿದ್ದೀರಿ. ಒಂದು ತಿಂಗಳು ಸಮಯ ನೀಡಿದ್ದರೂ ಈ ಬಗ್ಗೆ ಸರ್ಕಾರ ನೀತಿ ರೂಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿರ್ಬಂಧ ನಿರ್ಧಾರ ಪ್ರಶ್ನಿಸಿ ಆ್ಯಪ್ ಆಧಾರಿತ ಸೇವೆ ಒದಗಿಸುವ ಕಂಪನಿಗಳು ಕರ್ನಾಟಕ ಹೈಕೋರ್ಟ್  ಮೆಟ್ಟಿಲೇರಿದ್ದವು. ಈ ವೇಳೆ ಬೈಕ್ ಟ್ಯಾಕ್ಸಿ ಸಂಬಂಧ ನೀತಿ ಚೌಕಟ್ಟು ನಿಗದಿಪಡಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

Key words: Bike taxi, ban, High Court , displeasure , government