ಬೆಂಗಳೂರಿನಲ್ಲಿ 7 ಸಾವಿರಕ್ಕೂ ಹೆಚ್ಚು ಗುಂಡಿ ಮುಚ್ಚಿದ್ದು, 5 ಸಾವಿರ ಬಾಕಿ ಇವೆ:  ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು,ಸೆಪ್ಟಂಬರ್,20,2025 (www.justkannada.in): ಬೆಂಗಳೂರಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ರಸ್ತೆಗುಂಡಿಗಳನ್ನ  ಮುಚ್ಚಲಾಗಿದ್ದು, ಐದು ಸಾವಿರದಷ್ಟು ಗುಂಡಿಗಳು ಮಾತ್ರ ಬಾಕಿ ಇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ನಾವು ಬದ್ಧ, ರಸ್ತೆ ಗುಂಡಿಗಳನ್ನ ಮುಚ್ಚಲು ಸಮಾರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಯಾರೂ ಉದ್ದೇಶಪೂರ್ವಕವಾಗಿ ರಸ್ತೆಗುಂಡಿಗಳನ್ನು ಮಾಡುವುದಿಲ್ಲ. ಅತಿಯಾದ ಮಳೆ ಬಿದ್ದ ಕಾರಣಕ್ಕೆ ಗುಂಡಿಗಳಾಗಿದ್ದು,  ಸಾರ್ವಜನಿಕರು ಸೇರಿದಂತೆ ಎಲ್ಲರೂ ರಸ್ತೆಗುಂಡಿಗಳು ಕಂಡರೆ ಗಮನಕ್ಕೆ ತರುವ ವ್ಯವಸ್ಥೆ ರೂಪಿಸಲಾಗಿದೆ ಎಂದರು.

ಇದೇ ವೇಳೆ ಬಿಜೆಪಿಗೆ ಕುಟುಕಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಶಾಸಕರಿಗೂ ಅನುದಾನ ನೀಡಲಾಗಿದೆ. ನನ್ನ ಅನುದಾನದಲ್ಲೂ ಯಾವುದೇ ತಾರತಮ್ಯ ಇಲ್ಲದೆ ನಗರದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದ್ದೇವೆ. ಆದರೆ  ಏಕೆ ರಸ್ತೆಗುಂಡಿಗಳನ್ನು ಮುಚ್ಚಿಸಿಲ್ಲ ಎಂದು ಪ್ರಶ್ನಿಸಿದರು.

‘ಬಿಜೆಪಿಯವರು ಮೊದಲು ತಮ್ಮ‌ಪಾಲಿನ ಕೆಲಸ ಮಾಡಲಿ. ಅನಂತರ ರಾಜಕೀಯ ಮಾಡಲಿ. ನಾವು ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಟಾಂಗ್ ಕೊಟ್ಟರು.

Key words: 7,000 potholes ,Bengaluru, DCM, D.K. Shivakumar