ಬೆಂಗಳೂರು,ಸೆಪ್ಟಂಬರ್,19,2025 (www.justkannada.in): ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದ ಬೆನ್ನಲ್ಲೆ ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮೈಸೂರು ದಸರಾವನ್ನು ಧಾರ್ಮಿಕ ನೆಲೆಗಟ್ಟಿಗೆ ಸೀಮಿತವಾಗಿಸಲು ಸಾಧ್ಯವಿಲ್ಲ. ಜಾತಿ, ಧರ್ಮಗಳನ್ನು ಮೀರಿ ನಾಡಿನ ಸಮಸ್ತ ಜನರು ಕೂಡಿ ಸಂಭ್ರಮಿಸುವ ಹಬ್ಬವೆಂದು ನಾವು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೆವು, ಆದರೂ ಇದರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ, ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಯಿತು. ಈಗ ಸುಪ್ರೀಂ ತೀರ್ಪಿನಿಂದ ನಮ್ಮ ಸರ್ಕಾರದ ನಿಲುವಿಗೆ ಮನ್ನಣೆ ದೊರೆತಿದೆ ಎಂದು ಭಾವಿಸುತ್ತೇನೆ.
ಜಾತಿ, ಧರ್ಮಗಳ ವೈಷಮ್ಯ ಬಿತ್ತುವ ವಿಚ್ಛಿದ್ರಕಾರಿ ಮನಸುಗಳಿಗೆ ಇನ್ನಾದರೂ ತಾಯಿ ಚಾಮುಂಡೇಶ್ವರಿ ಸದ್ಬುದ್ದಿ ನೀಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
Key words: mysore dasara, Banu mustak, Supreme Court, CM Siddaramaiah