ಡಾ.ರಾಜ್ ಕುಮಾರ್ ನಾಮಫಲಕ ಮರುಸ್ಥಾಪಿಸಿ, ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಿ- ಪಾಲಿಕೆಗೆ ಆಗ್ರಹ

ಮೈಸೂರು,ಸೆಪ್ಟಂಬರ್,19,2025 (www.justkannada.in): ಫೌಂಟೇನ್ ಸರ್ಕಲ್ ನಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ನಾಮಫಲಕ ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧ. ಸಮಗ್ರ ಕನ್ನಡ ಅಭಿವೃದ್ಧಿ ಅಧಿನಿಯಮ” ಕಾನೂನು ಅಡಿ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಆಡಳಿತಾತ್ಮಕ ಶಿಸ್ತು ದಂಡನಾತ್ಮಕ ಕ್ರಮ ಕೈಗೊಂಡು ಡಾ. ರಾಜ್ ನಾಮಫಲಕ ಮರುಸ್ಥಾಪಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ಕನ್ನಡ ಅನುಷ್ಠಾನ ಮಂಡಳಿಯು ಆಗ್ರಹಿಸಿದೆ.

ಮೈಸೂರು ಮಹಾನಗರಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ  ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಡಾ.ಆರ್ ಎ ಪ್ರಸಾದ್ ಅವರು,  ಕನ್ನಡಕ್ಕೆ ಕಳಸವಾಗಿದ್ದ ಡಾ.ರಾಜ್ ಕುಮಾರ್ ವೃತ್ತದಲ್ಲಿ(ಫೌಂಟೇನ್ ಸರ್ಕಲ್)ದ್ದ ಡಾ|ರಾಜ್ ಕುಮಾರ್ ನಾಮಫಲಕ ಉದ್ದೇಶಪೂರ್ವಕ ಯಾರದ್ದೋ ಚಿತಾವಣೆಯಿಂದ ಮೈಸೂರು ನಗರ ಪಾಲಿಕೆಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.  ಈ ಮೂಲಕ ಡಾ ರಾಜ್ ಕುಮಾರ್ ಅವರಿಗೆ ಅವಮಾನ ಮಾಡಲಾಗಿದೆ.  ಕನ್ನಡ ಸಮುದಾಯಕ್ಕೆ ಮಸಿ ಬಳಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಹಾಗೂ ಆಡಳಿತಾತ್ಮಕ ದಂಡನಾತ್ಮಕ ಕ್ರಮಕ್ಕೆ ಕಾನೂನಾತ್ಮಕ ದೂರು ನೀಡಿದ್ದು ಮೈಸೂರಿನ ಪ್ರಜ್ಞಾನವಂತರು ಹಿರಿಯರು ನಮ್ಮ ಗಮನಕ್ಕೆ ಸಾಕ್ಷಿ ಸಮೇತ ತಂದಿದ್ದಾರೆ.

ಅದರಂತೆ  ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಹೆಸರನ್ನು ಈ ಹಿಂದೆಯೇ ಮೈಸೂರು ನಗರ ಪಾಲಿಕೆಯಿಂದ ನಿರ್ಣಯಿಸಿ ಫೌಂಟೇನ್ ಸರ್ಕಲ್ ಎಂದು ಹೇಳಲಾಗುತ್ತಿದ್ದ ಬೆಂಗಳೂರು ರಸ್ತೆಯ ಮೂಲಕ ಹಾದು ಬರುವ 5 ರಸ್ತೆಗಳು ಕೂಡುವ ಬೃಹತ್ ವೃತ್ತಕ್ಕೆ “ಡಾ.ರಾಜ್ ಕುಮಾರ್ ವೃತ್ತ” ಎಂದು ನಾಮಕರಣ ಮಾಡಿ ನಾಮಫಲಕ ಹಾಕಲಾಗಿತ್ತು. ವೃತ್ತದ ಮೂಲೆಯಲ್ಲಿ ಅಳವಡಿಸಲಾಗಿತ್ತು ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರು ಸಂಚಾರಿ ಪೋಲೀಸರು “ಡಾ.ರಾಜ್ ಕುಮಾರ್ ವೃತ್ತ” ಎಂದು ಅಧಿಕೃತವಾಗಿ ಉಲ್ಲೇಖಿಸಿ ಬಳಸುತ್ತಿದ್ದರು. ಈಗ ಡಾ. ರಾಜ್ ಕುಮಾರ್ ನಾಮಫಲಕ ತೆರವುಗೊಳಿಸಿ’ ಮರುಸ್ಥಾಪಿಸದೆ ಮೈಸೂರು ಮಹಾನಗರ ಪಾಲಿಕೆ ಮತ್ತು ಅದರ ಸಂಬಂಧಿಸಿದ ಅಧಿಕಾರಿಗಳು ಅವಮಾನ ಮಾಡಿರುವುದು  ಘೋರ ತಪ್ಪು. ಹೀಗಾಗಿದ್ದರೂ ಆಯುಕ್ತರು ಮೌನಕ್ಕೆ ಶರಣಾಗಿರುವುದು ಬೇಜವಾಬ್ದಾರಿತನ.

ಈಗ ನೋಡಿದರೆ ಉದ್ದೇಶ ಪೂರ್ವಕವಾಗಿ (ಮೈಸೂರಿನ ಹಿಂದಿನ ಫೌಂಟೇನ್ ವೃತ್ತ)ಕ್ಕೆ ಇಡಲಾಗಿದ್ದ “ಡಾ.ರಾಜ್ ಕುಮಾರ್ ವೃತ್ತ” ಹೆಸರಿನ ನಾಮಫಲಕ ರಾತ್ರೋರಾತ್ರಿ ತೆರವುಗೊಳಿಸಿ ಆ ಜಾಗದಲ್ಲಿ ಉದ್ದೇಶಪೂರ್ವಕ ಪೂರ್ವಗ್ರಹ ಪೀಡಿತರಾಗಿ ಬಸ್ ತಂಗುದಾಣ ನಿರ್ಮಿಸಲು ಮುಂದಾಗಿದೆ.

ಹೀಗಾಗಿ ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿ ತುರ್ತು ಆಡಳಿತಾತ್ಮಕ ಶಿಸ್ತು ಕ್ರಮಕೈಗೊಂಡು ನಾಮಫಲಕ ಮರುಸ್ಥಾಪಿಸಬೇಕು ಈ ಮೂಲಕ ಸಾರ್ವಜನಿಕ ಸಾಕ್ಷಿಯಾಗಿ ಪ್ರಕಟಣೆ ಹೊರಡಿಸುವಂತೆ ಮೈಸೂರಿನ ನಗರ ಪಾಲಿಕೆಯ ಆಯುಕ್ತರನ್ನು ಸಮಸ್ತ ನಾಡಿಗರ ಪರವಾಗಿ ಆಗ್ರಹಪೂರ್ವಕ ಹಕ್ಕೊತ್ತಾಯ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Key words: Mysore, Dr. Rajkumar, nameplate, City corporation